ದಾವಣಗೆರೆ:ನಂಬಿ ಬಿಜೆಪಿಗೆ ಬಂದಿರುವ ನಮಗೆ ಸಿಎಂ ಯಡಿಯೂರಪ್ಪನವರು ಮೋಸ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ನಾವು ಈಗ ಗುಂಪುಗಾರಿಕೆ ಮಾಡುವುದು ಸರಿಯಲ್ಲ ಎಂದು ಹಿರೇಕೆರೂರು ಬಿಜೆಪಿ ಶಾಸಕ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಬಗ್ಗೆ ಬಿಜೆಪಿ ಹೈಕಮಾಂಡ್ ನಿರ್ಧರಿಸಲಿದೆ. ಸೋತವರನ್ನು ಸಚಿವರನ್ನಾಗಿ ಮಾಡಬೇಕು, ಮಾಡಬಾರದು ಅಂತೇನಿಲ್ಲ. ನಂಬಿ ಬಂದವರನ್ನು ಕೈ ಬಿಡಬೇಡಿ ಅನ್ನೋದಷ್ಟೇ ನಮ್ಮ ಮನವಿ ಎಂದರು. ಉಪಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರು ಒತ್ತಡದಲ್ಲಿರುವುದರಿಂದ ಅವರಿಗೂ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದರು.
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ಇಲ್ಲ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ಹಾಗೂ ಸಿಎಂ ನಡುವೆ ಏನು ಮಾತುಕತೆ ನಡೆದಿದೆಯೋ ನನಗೆ ಗೊತ್ತಿಲ್ಲ. 17 ಜನರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಡಿಸಿಎಂ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಸಿಎಂಗೆ ಬಿಟ್ಟ ವಿಚಾರ. ನಾವು ಒಗ್ಗಟ್ಟಾಗಿ ರಾಜೀನಾಮೆ ನೀಡಿದ್ದೆವು. ಈಗಲೂ ಒಟ್ಟಾಗಿರುತ್ತೇವೆ. ಸೋತವರನ್ನು ಕೈಬಿಡಬಾರದು ಎಂದರು.
ಈಗಾಗಲೇ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ. ನನಗೆ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಇದೆ. ಎಲ್ಲರಿಗೂ ಸಿಗದಿದ್ದರೂ ಸ್ವಲ್ಪ ದಿನಗಳವರೆಗೆ ಕಾಯಬೇಕು. ಕಾಂಗ್ರೆಸ್, ಜೆಡಿಎಸ್ ನಿಂದ ಬಿಜೆಪಿಗೆ ಬಂದವರೆಲ್ಲರಿಗೂ ಸಚಿವ ಸ್ಥಾನ ಸಿಗುತ್ತೆ. ಸ್ವಲ್ಪ ತೊಂದರೆ ಆಗಿರಬಹುದು, ಎಲ್ಲವೂ ಸರಿ ಹೋಗುತ್ತೆ. ಸ್ವಲ್ಪ ತಾಳ್ಮೆಯಿಂದ ಕಾಯಬೇಕಿದೆ ಎಂದು ಬಿ ಸಿ ಪಾಟೀಲ್ ಹೇಳಿದ್ರು.
ಮಾಜಿ ಸಿಎಂ ಕುಮಾರಸ್ವಾಮಿಯವರು ಮಣ್ಣಿನ ಮಗ ಎಂಬ ಹೇಳಿಕೆಗೆ ಪ್ರತಿಕ್ರಿಯಸಿದ ಬಿ.ಸಿ. ಪಾಟೀಲ್ ಅವರು, ಕುಮಾರಸ್ವಾಮಿಯವರ ಜೀನ್ಸ್ ಅವರಿಗೇ ಗೊತ್ತಿರಬೇಕು. ಅಂದು ಸಿಎಂ ಆಗಿದ್ದೇ ಅವರ ಅದೃಷ್ಟ ಎಂದು ವ್ಯಂಗ್ಯವಾಡಿದರು.