ದಾವಣಗೆರೆ: ಹೆರಿಗೆಯಾದ ಎರಡು ಗಂಟೆಯಲ್ಲಿ ನಾಪತ್ತೆಯಾಗಿ ಏಳು ದಿನ ಕಳೆದ್ರೂ ಗಂಡು ಮಗುವೊಂದು ಪತ್ತೆಯಾಗಿದೇ ಹೆತ್ತವರು ಕಣ್ಣೀರು ಹಾಕ್ತಿರುವ ಘಟನೆ ನಗರದಲ್ಲಿ ನಡೆದಿದೆ. ಕಳೆದ ವಾರವಷ್ಟೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉಮೇ ಸಲ್ಮಾ ಹಾಗೂ ಇಸ್ಮಾಯಿಲ್ ಜಬೀವುಲ್ಲಾ ಎಂಬ ದಂಪತಿಗೆ ಜನಿಸಿದ ಗಂಡು ಶಿಶು ನಾಪತ್ತೆಯಾಗಿದೆ.
ಮಗುವನ್ನು ಹುಡುಕಿಕೊಡುವುದಾಗಿ ಹೇಳಿ ದೂರು ಪಡೆದ ಮಹಿಳಾ ಠಾಣೆಯ ಮಾನವ ಸಾಗಾಣಿಕೆ ನಿಷೇಧ ಘಟಕದ ಪೊಲೀಸರು, ಮಕ್ಕಳ ಕಳ್ಳಿಗಾಗಿ ಹುಡುಕಾಟ ನಡೆಸಿದ್ದರೂ ಕೂಡ ಏಳು ದಿನದ ಹಸುಗೂಸು ಮಾತ್ರ ಪತ್ತೆಯಾಗಿಲ್ಲ. ಬಿಳಿ ವೇಲ್ ಧರಿಸಿರುವ ಓರ್ವ ಅಪರಿಚಿತ ಮಹಿಳೆ ಮಗುವನ್ನು ಎತ್ತಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಆಕೆಯನ್ನು ಪತ್ತೆ ಮಾಡಲು ಬಲೆ ಬೀಸಿದ್ದಾರೆ.
ಕಳ್ಳತನವಾಗಿದ್ದು ಹೇಗೆ?: ಒಂದು ವಾರದ ಹಿಂದೆ ಉಮೇ ಸಲ್ಮಾಳ ಹೆರಿಗೆ ಬಟ್ಟೆ ತರಲು ಸಿಬ್ಬಂದಿ ಆಕೆಯ ಗಂಡನಿಗೆ ಹೇಳಿ ಕಳುಹಿಸಿದ್ದರಂತೆ. ಆತ ಬಟ್ಟೆ ತರುವಷ್ಟರಲ್ಲಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಇದ್ದ ಮಗುವನ್ನು ಮಹಿಳೆಯೊಬ್ಬರು ಸ್ವೀಕರಿಸಿ ಕಾಲ್ಕಿತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಪತ್ತೆಯಾಗಿದೆ.
ಕರುಳಬಳ್ಳಿಗೆ ಅಂಗಲಾಚುತ್ತಿದೆ ಕುಟುಂಬ.. ಮಗುವಿನ ಸಂಬಂಧಿಯ ಕೈಗೆ ಮಗು ಕೊಡುವ ಬದಲು ಆಸ್ಪತ್ರೆಯ ಸಿಬ್ಬಂದಿ ಮತ್ತೊಬ್ಬರ ಕೈಗೆ ಮಗು ಕೊಟ್ಟು ಕಳುಹಿಸಿರುವುದು ಸಿಸಿಟಿವಿಯಲ್ಲಿ ದೃಢವಾಗಿದೆ. ತಾಯಿ ಕಾರ್ಡ್ ಕೇಳದೆ ಆಸ್ಪತ್ರೆ ಸಿಬ್ಬಂದಿ ಅಪರಿಚಿತರ ಕೈಗೆ ಮಗುವನ್ನು ನೀಡಿ ಎಡವಟ್ಟು ಮಾಡಿಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ಶಿವಮೊಗ್ಗ: ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ನೀಡಿದ್ದ ಮುಖ್ಯ ಶಿಕ್ಷಕಿ ಅಮಾನತು