ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯ ಅನುದಾನವನ್ನೆಲ್ಲ ಲೂಟಿ ಮಾಡಿ ಈಗ ಶಾಸಕರ ಮೇಲೆ ಹಾಕುತ್ತಿದ್ದಾರೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಕಿಡಿಕಾರಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋತಿ ತಾನು ತಿಂದ ಮೇಲೆ ಮೇಕೆ ಮೂತಿಗೆ ಒರೆಸಿದಂತೆ ಸಂಸದರು ಮಾಡಿದ್ದಾರೆ ಎಂದು ಟೀಕಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಲೂಟಿ ಮಾಡಿ ಈಗ ಶಾಸಕರ ಮೇಲೆ ಹಾಕ್ತಾರೆ. ಅಲ್ಲದೆ ಸ್ಮಾರ್ಟ್ ಸಿಟಿಗೂ ತಮಗೂ ಸಂಬಂಧ ಇಲ್ಲ ಎಂದು ಹೇಳ್ತಾರೆ. ಹಾಗಾದ್ರೆ ಸ್ಮಾರ್ಟ್ ಸಿಟಿ ಯೋಜನೆಯ ಹಣ ಅವರ ಕಾಲೇಜಿಗೆ ಹಾಕಿಕೊಂಡ್ರಾ, ಇಲ್ಲ ಕಾಲೇಜಿನ ಮುಂದಿನ ರಸ್ತೆಗಳಿಗೆ ಹಾಕಿಕೊಂಡ್ರಾ ಎಂದು ವಾಗ್ದಾಳಿ ಹರಿಹಾಯ್ದರು.
ಸ್ಮಾರ್ಟ್ ಸಿಟಿ, ಕೆರೆ ಅಭಿವೃದ್ಧಿ ಯೋಜನೆ ಹಾಗೂ ವಿವಿಧ ಯೋಜನೆಗಳ ಹಣವನ್ನು ಸಿದ್ದೇಶ್ವರ್, ಜಿಲ್ಲಾ ಮಂತ್ರಿ ಸೇರಿ ತಿಂದು ತೇಗಿದ್ದಾರೆ. ಈಗ ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ರೇಣುಕಾಚಾರ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇಷ್ಟು ದಿನ ಅವರಿಗೆ ಯಾವುದೇ ಅಧಿಕಾರ ಮಾಡಲು ಬಿಡಲಿಲ್ಲ. ಈಗ ನಾನು ಯಾವುದರಲ್ಲೂ ಮಧ್ಯಪ್ರವೇಶ ಮಾಡಲ್ಲ, ನಾನು ಕೇಂದ್ರದ ರಾಜಕಾರಣ ಮಾತ್ರ ಮಾಡುತ್ತೇನೆ. ರಾಜ್ಯದ ರಾಜಕಾರಣ ಬೇಡ ಎಂದೆಲ್ಲ ಹೇಳುತ್ತಿದ್ದಾರೆ. ಹಾಗಾದರೆ ಸುಖಾ ಸುಮ್ಮನೆ ಆರೋಪ ಮಾಡುವುದು ಯಾಕೆ. ಅಷ್ಟಿದ್ದರೆ ಇಲ್ಲಿಗೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಸವಾಲೆಸೆದರು. ಇನ್ನು, ಕೋವಿಡ್ ಸಂದರ್ಭದಲ್ಲಿ ನಡೆದ ಹಗರಣಗಳು ಹಾಗೂ ಇತರ ಹಗರಣಗಳು ಆಗಿವೆ. ಈಗಾಗಲೇ ಮೂವರು ಶಾಸಕರನ್ನು ತೆಗೆದಿದ್ದಾರೆ. ಚುನಾವಣೆಯೊಳಗೆ ಇನ್ಯಾರನ್ನು ತೆಗೆಯುತ್ತಾರೆ ಎಂದು ಕಾದು ನೋಡಬೇಕು ಎಂದರು.