ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ದಾವಣಗೆರೆ: ವಾಲ್ಮೀಕಿ ಗುರುಪೀಠದ ಸ್ವಾಮೀಜಿಗೆ ಮಕ್ಕಳಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಇದು ಗಂಭೀರವಾದ ಆರೋಪವಾಗಿದ್ದು ನಾನೇ ಸ್ವಾಮೀಜಿಗೆ ಡಿಎನ್ಎ ಪರೀಕ್ಷೆ ಮಾಡಿಸಲು ಸಲಹೆ ಕೊಟ್ಟಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿಂದು ನಡೆದ ಸ್ಪಷ್ಟೀಕರಣ ಸಭೆಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಯವರನ್ನು ಸಂಶಯದಿಂದ ನೋಡುವುದು ಸಮಾಜದವರಿಗೆ ಕಷ್ಟ. ಹೀಗಾಗಿ ಸ್ವಾಮೀಜಿಯವರ ಡಿಎನ್ಎ ಪರೀಕ್ಷೆಯನ್ನು ಪೊಲೀಸ್ ಕಂಪ್ಲೇಂಟ್ ಕೊಟ್ಟು ಮಾಡಬೇಕಾ? ಅಥವಾ ಕೋರ್ಟ್ಗೆ ಹೋಗಿ ಪ್ರೈವೇಟ್ ಕಂಪ್ಲೇಂಟ್ ಮಾಡಿ ಪಿಸಿಯಿಂದ ಆರ್ಡರ್ ತರಬೇಕಾ? ಎಂದು ತಿಳಿದುಕೊಂಡು ಮುರ್ನಾಲ್ಕು ತಿಂಗಳಲ್ಲಿ ಇತ್ಯಾರ್ಥ ಮಾಡೋಣ ಎಂದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಸ್ವಾಮೀಜಿ ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ನನ್ನ ಅನಿಸಿಕೆ ಹೇಳಿದ್ದೇನೆ. ಆರೋಪ ಸಂಬಂಧ ಸ್ವಾಮೀಜಿಯವರು ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದಾರೆ. ಇದನ್ನುಅನವಶ್ಯಕವಾಗಿ ಮುಂದುವರೆಸಬಾರದು. ಸ್ವಾಮೀಜಿಯವರ ಡಿಎನ್ಎ ಪರೀಕ್ಷೆ ಮಾಡಿಸುತ್ತೇವೆ, ಕೋರ್ಟ್ನ ಮೂಲಕ ಮಾಡಿಸಿದರೆ ಅಧಿಕೃತವಾಗಿರುತ್ತದೆ ಈ ಕುರಿತು ಚಿಂತನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಆರೋಪದ ಬಗ್ಗೆ ಸ್ವಾಮೀಜಿ ಹೇಳಿದ್ದೇನು?:ಆರೋಪ ಎದುರಿಸುತ್ತಿರುವ ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ನನ್ನ ಮೇಲೆ ಏನೇ ಅನುಮಾನಗಳು ಇರಲಿ ಸಮಾಜದ ಜನರು ಬಂದು ನೇರವಾಗಿ ನನ್ನನ್ನು ಕೇಳಿ, ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೋಗೋದು ಸರಿಯಾ ಎಂದು ಪ್ರಶ್ನಿಸಿದರು. ನಾನು ಮುಕ್ತವಾಗಿ ಇದ್ದೇನೆ, ನೀವು ಏನು ತೀರ್ಮಾನ ಕೈಗೊಳ್ಳುತ್ತಿರೋ ಅದಕ್ಕೆ ಬದ್ಧ. ಸ್ವಾಮೀಜಿಗಳು ತಮ್ಮ ಹೆಸರಿನಲ್ಲಿ ಆಸ್ತಿಯನ್ನು ಮಾಡಿಕೊಂಡಿದ್ದಾರೆ, ಮಠದಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಭಕ್ತರು ಅರೋಪ ಮಾಡಿದ್ದರು. ಆ ಆರೋಪ ಮಾಡಿದವರನ್ನು ಲಿಂಗೈಕ್ಯ ಪುಣ್ಯಾನಂದಪುರಿ ಸ್ವಾಮೀಜಿ ಅವರು ನೋಡಿಕೊಳ್ಳುತ್ತಾರೆ. ಆದರೆ ನನ್ನ ಪೂರ್ವಾಶ್ರಮದ ಹೆಸರಿನಲ್ಲಿ ಯಾವುದೇ ಆಸ್ತಿಗಳಿಲ್ಲ ಎಂದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆಸ್ತಿ ಈ ಹಿಂದೆ ಪುಣ್ಯಾನಂದಪುರಿ ಸ್ವಾಮೀಜಿಗಳ ಹೆಸರಿನಲ್ಲಿತ್ತು. ಅವರ ನಂತರ ಆಸ್ತಿ ಪಹಣಿ ನನ್ನ ಹೆಸರಿಗೆ ಬಂದಿವೆ. ಲಿಂಗೈಕ್ಯ ಪುಣ್ಯಾನಂದಪುರಿ ಸ್ವಾಮೀಜಿ ಹೆಸರಿನಲ್ಲಿದ್ದ ಆಸ್ತಿ ತಮ್ಮ ಮಗನಿಗೆ ಸೇರಬೇಕು ಎಂದು ಲಿಂಗೈಕ್ಯ ಶ್ರೀಗಳ ಕುಟುಂಬಸ್ಥರು ಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಅದು ಮಠದ ಆಸ್ತಿ, ಹೀಗಾಗಿ ಆಸ್ತಿ ಮಠಕ್ಕೆ ಸೇರಬೇಕು ಎಂದು ಹೇಳಿದೆ. ಅದೇ ರೀತಿ ನನ್ನ ನಂತರ ಮುಂಬರುವ ಸ್ವಾಮೀಜಿಗೆ ಈ ಆಸ್ತಿ ವರ್ಗಾವಣೆಯಾಗುತ್ತದೆ. ಏನಾದರೂ ಅನುಮಾನವಿದ್ದರೆ ಟ್ರಸ್ಟ್ ಸಮ್ಮುಖದಲ್ಲೇ ಬಾಂಡ್ ಮೇಲೆ ಬರೆದುಕೊಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಶಾಮನೂರು ಶಿವಶಂಕರಪ್ಪನವರು ಒಂದು ಜಾತಿಯ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿರುವುದು ಸರಿಯಲ್ಲ: ಹೆಚ್.ವಿಶ್ವನಾಥ್