ದಾವಣಗೆರೆ: ಕೇಂದ್ರ ಸರ್ಕಾರ ಅಕ್ಕಿಯನ್ನು ಪುಕ್ಸಟ್ಟೆ ಕೊಡುವ ರೀತಿ ವರ್ತಿಸುತ್ತಿದೆ. ಇವರೆಲ್ಲ ಅದಾನಿ ಅಂಬಾನಿ ಜೊತೆ ಬೆಳೆದವರು, ಬಡವರ ಕಷ್ಟ ಇವರಿಗೆ ಅರ್ಥವಾಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 10 ಕೆಜಿ ಅಕ್ಕಿಯನ್ನು ನಾವು ಕೊಡಲು ಸಿದ್ಧರಿದ್ದೇವೆ. ಆದರೆ ಕೇಂದ್ರದ ಅಸಹಕಾರದ ನೀತಿಯಿಂದ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
"ಆಹಾರ ಸಚಿವ ಹೆಚ್ ಮುನಿಯಪ್ಪಗೆ ಪ್ರಧಾನಿ ಭೇಟಿಗೆ ಅವಕಾಶ ನೀಡದಿರುವುದನ್ನು ನಾನು ಖಂಡಿಸುತ್ತೇನೆ. ಬಡವರ ಅನ್ನದ ಜೊತೆ ಆಟವಾಡುತ್ತಿರುವ ಈ ಪ್ರವೃತಿಯನ್ನು ನಾನು ಒಪ್ಪುವುದಿಲ್ಲ. 10 ಕೆಜಿ ಅಕ್ಕಿ ಕೊಡಲು ತಯಾರಿದ್ದೇವೆ. ರಾಜ್ಯದಲ್ಲಿ ಸ್ವಲ್ಪ ತೊಂದರೆಯಾಗಿದೆ. ಬೇರೆ ರಾಜ್ಯದವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆ ಪರಿಹಾರ ಆಗುತ್ತದೆ" ಎಂದು ಭರವಸೆ ನೀಡಿದರು. ಬಳಿಕ ಹಾಲಿನ ದರ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಹಾಲಿನ ದರ ಏರಿಕೆ ಬಗ್ಗೆ ಅದು ಏರಿಕೆಯಾದ ನಂತರವೇ ಮಾತನಾಡೋಣ. ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ ಅಷ್ಟೇ. ಅದು ಚರ್ಚೆಯಾಗುತ್ತದೆ. ಅಡ್ವಾನ್ಸ್ ಆಗಿ ನಾವು ಏನನ್ನು ಹೇಳುವುದಿಲ್ಲ" ಎಂದರು.
ಕೈಗಾರಿಕಾ ಬಂದ್ ಘೋಷಣೆ ವಿಚಾರವಾಗಿ ಮಾತನಾಡಿ, "ಸಹಜವಾಗಿ ತೆರಿಗೆ ತೆಗೆದುಕೊಳ್ಳಲೇಬೇಕು. ಕೆಲವು ವಿಚಾರವಾಗಿ ಟ್ಯಾಕ್ಸ್ ಕಡಿಮೆ, ಜಾಸ್ತಿ ಮಾಡುವುದು ಇದ್ದೇ ಇರುತ್ತೆ. ಒಂದು ಕೈಯಲ್ಲಿ ಕೊಟ್ಟು ಒಂದು ಕೈಯಲ್ಲಿ ಕಿತ್ತುಕೊಳ್ಳುತ್ತಾರೆ ಎಂಬುದು ಅವರವರ ಭಾವನೆಯಷ್ಟೇ. ಸದ್ಯಕ್ಕೆ ಮದ್ಯದ ದರ ಏರಿಕೆ ಮಾಡಿಲ್ಲ. ಅಬಕಾರಿ ಶುಲ್ಕವನ್ನೂ ಏರಿಕೆ ಮಾಡಿಲ್ಲ" ಎಂದು ತಿಳಿಸಿದರು. ಇನ್ನು ಸಿದ್ದರಾಮಯ್ಯನವರು ಪೂರ್ಣವಧಿಯವರೆಗೆ ಸಿಎಂ ಆಗಿ ಅಧಿಕಾರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, "ಶಾಸಕಾಂಗ ಸಭೆ ಇದೆ, ಹೈಕಮಾಂಡ್ ಇದೆ ಅಲ್ಲಿ ನಿರ್ಧಾರವಾಗುತ್ತದೆ. ಈಗ ಏನ್ ಹೇಳ್ತಾ ಇದ್ದಾರೋ, ಅದು ಅವರ ವೈಯಕ್ತಿಕ. ಈ ಬಗ್ಗೆ ನಾನೇನು ಹೇಳುವುದಿಲ್ಲ" ಎಂದು ಹೇಳಿದರು.