ದಾವಣಗೆರೆ: ಶ್ರೀನಿವಾಸ ಮಾನೆ ಉತ್ತಮ ಕೆಲಸ ಮಾಡಿದ್ದಕ್ಕೆ ಹಾನಗಲ್‌ನಲ್ಲಿ ಗೆದ್ದಿದ್ದಾರೆ. ನಮ್ಮ ಅಭ್ಯರ್ಥಿ ಕೆಲಸ ಮಾಡಿಲ್ಲ, ಅದಕ್ಕೆ ಸೋತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹಾನಗಲ್ ಕಾಂಗ್ರೆಸ್ ಅಭ್ಯರ್ಥಿಯನ್ನು ಹೊಗಳಿದರು.
ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನಗರದಲ್ಲಿ ಮಾತನಾಡಿದ ಅವರು, ಮಾನೆ ಎರಡ್ಮೂರು ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಸಿದ್ದರಾಮಯ್ಯ, ಇಂದಿರಾಗಾಂಧಿ ಸೋತಿರಲಿಲ್ವಾ, ಹಾನಗಲ್‌ನಲ್ಲಿ ನಾವು ಸೋತಿದ್ದೇವೆ, ಸಿಂದಗಿಯಲ್ಲಿ ದಿಗ್ವಿಜಯ ಸಾಧಿಸಿದ್ದೇವೆ. ಎಲ್ಲ ಚುನಾವಣೆಯಲ್ಲೂ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ ಎಂದರು.
ಹಾನಗಲ್‌ನಲ್ಲಿ 7 ಸಾವಿರ ಮತಗಳಿಂದ ಸೋತಿದ್ದೇವೆ. ಆದ್ರೆ, ಸಿಂದಗಿಯಲ್ಲಿ 31 ಸಾವಿರ ಮತಗಳಿಂದ ಐತಿಹಾಸಿಕ ಗೆಲುವು ಸಾಧಿಸಿದ್ದೇವೆ. ಹಾನಗಲ್ ಸೋಲಿನ ಬಗ್ಗೆ ಪರಾಮರ್ಶೆ ನಡೆಸುತ್ತೇವೆ. ಸೋಲನ್ನಾಗಲಿ, ಗೆಲುವನ್ನಾಗಲಿ ಯಾವುದೇ ಒಬ್ಬರ ಮೇಲೆ ಹಾಕುವುದಿಲ್ಲ, ಭವಿಷ್ಯದ ಚುನಾವಣೆಯಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ ಎಂದರು.
ಸಿದ್ದರಾಮಯ್ಯ- ಡಿಕೆಶಿಗೆ ಸದಾ ಸಿಎಂ ಕುರ್ಚಿ ಮೇಲೆ ಕಣ್ಣು :
ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಎಂಬುದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಸದಾ ಸಿಎಂ ಕುರ್ಚಿ ಮೇಲೆ ಕಣ್ಣು. ಇದೇ ಚಿಂತೆಯಲ್ಲಿ ಅವರಿಗೆ ಹಗಲುರಾತ್ರಿ ನಿದ್ರೆ ಇಲ್ಲ, ಕನಸಲ್ಲಿ ಮಾತ್ರ ಸಿಎಂ ಸ್ಥಾನ ಇಟ್ಟುಕೊಳ್ಳಲಿ, ಹೊರಗೆ ಬಂದ್ರೆ ಪರಸ್ಪರ ಕಿತ್ತಾಡ್ತಾರೆ, ಭವಿಷ್ಯದಲ್ಲಿ ಅವರ ಗುಂಪುಗಾರಿಕೆ ಯಾವ ಮಟ್ಟಕ್ಕೆ ಹೋಗುತ್ತೆ ಎಂದು ಕಾದು ನೋಡಿ ಎಂದರು.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆ :
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆ ನಡೆಯುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ, ಇದನ್ನು ಕೇಂದ್ರದ ನಾಯಕರೇ ಸ್ಪಷ್ಟಪಡಿಸಿದ್ದಾರೆ, ಅವರಿಗಿಂತ ದೊಡ್ಡವನು ನಾನಲ್ಲ ಎಂದು ಹೇಳಿದರು.
ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಅಲ್ಲ. ಹಾನಗಲ್ ಫಲಿತಾಂಶವನ್ನು ಕಾಂಗ್ರೆಸ್ ದಿಕ್ಸೂಚಿ ಎಂದು ಪರಿಗಣಿಸಿದ್ರೆ, ಸಿಂದಗಿ ಫಲಿತಾಂಶವನ್ನು ಹೇಗೆ ಪರಿಗಣಿಸಬೇಕು. ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಸಚಿವ ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.