ದಾವಣಗೆರೆ: ಮುಂದೆ ಬರುವ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದ್ದು, ಅದಕ್ಕೆ ನಾವು ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲ ಇಲ್ಲ. ಅಮಿತ್ ಶಾ ಅವರು ಹೇಳಿದ್ದಕ್ಕೆ ನಾವು ಬದ್ಧ. ಯಡಿಯೂರಪ್ಪನವರ ಪ್ರವಾಸದ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುವುದರಲ್ಲಿ ತಪ್ಪೇನಿಲ್ಲ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ ಧೀಮಂತ ನಾಯಕ ಎಂದರು.
ದಾವಣಗೆರೆಯಲ್ಲಿ ಮುಂದಿನ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಭೈರತಿ ಬಸವರಾಜ್ ಬಿಎಸ್ವೈ ಮತ್ತು ಜಗದೀಶ್ ಶೆಟ್ಟರ್ ನಡುವೆ ನಡೆದ ಮಾತುಕತೆ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಬೊಮ್ಮಾಯಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಡಿಯೂರಪ್ಪನವರ ಬಗ್ಗೆ ಅಮಿತ್ ಶಾ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಭೈರತಿ ಸ್ಪಷ್ಟಪಡಿಸಿದರು.
10 ಸಾವಿರ ರೂ.ಬಹುಮಾನ:
ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿದ ದಾವಣಗೆರೆ ಜಿಲ್ಲೆಯ ಪ್ರತಿ ತಾಲೂಕಿನ ಓರ್ವ ಶಿಕ್ಷಕ ಹಾಗೂ ಓರ್ವ ಶಿಕ್ಷಕಿಗೆ ತಲಾ ಹತ್ತು ಸಾವಿರ ರೂ. ಬಹುಮಾನ ನೀಡುತ್ತೇನೆ. ಬರುವ ನವೆಂಬರ್ 1 ರಂದು ಇಂತಹ ಶಿಕ್ಷಕರನ್ನು ಗುರುತಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.