ದಾವಣಗೆರೆ :ಯತ್ನಾಳ್‌ಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಅವರ ಟೀಕೆಗಳಿಗೆಲ್ಲ ಉತ್ತರ ಕೊಡೋಕೆ ಆಗೋದಿಲ್ಲ. ಹದಿನೇಳು ಜನಕ್ಕೆ ಮಾತ್ರವಲ್ಲ ಎಲ್ಲರಿಗೂ ಸಿಎಂ ಅನುದಾನ ಕೊಟ್ಟಿದ್ದಾರೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ವಾಗ್ದಾಳಿ ನಡೆಸಿದರು.
ಹರಿಹರ ತಾಲೂಕಿನ ಉಕ್ಕಡಗಾತ್ರಿ ಗ್ರಾಮದಲ್ಲಿ ಕರಿಬಸವೇಶ್ವರನ ದರ್ಶನ ಬಳಿಕ ಮಾತನಾಡಿದ ಅವರು, ಈ ಹದಿನೇಳು ಜನರು ಬರದಿದ್ದರೆ ಇವತ್ತು ಬಿಜೆಪಿ ಸರ್ಕಾರ ಬರುತ್ತಿರಲಿಲ್ಲ ಎಂಬುದನ್ನ ಯತ್ನಾಳ್ ಅರ್ಥ ಮಾಡಿಕೊಳ್ಳಲಿ. ಇವರ ಲೆಟರ್ ಹೆಡ್ಗಳೆಲ್ಲ ಧೂಳು ತಿನ್ನುತ್ತಿದ್ದವು. ಹದಿನೇಳು ಜನರ ತ್ಯಾಗದಿಂದ ಬಿಜೆಪಿ ಸರ್ಕಾರ ಬಂದಿದೆ. ಸರ್ಕಾರ ಬಂದಿರೋದಕ್ಕೆ ಅವರು ಇಷ್ಟೆಲ್ಲ ಮಾತಾಡ್ತಿದ್ದಾರೆ. ಅದು ಸರಿಯಲ್ಲ ಎಂದರು.
ಶಾಸಕ ಯತ್ನಾಳ್ ವಿರುದ್ಧ ಕೃಷಿ ಸಚಿವ ಬಿ ಸಿ ಪಾಟೀಲ್ ವಾಗ್ದಾಳಿ.. ಇದನ್ನೂ ಓದಿ:ಜಿಲೆಟಿನ್ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಹೆಚ್.ಡಿ.ರೇವಣ್ಣ ಭೇಟಿ, ಪರಿಶೀಲನೆ
ಟೀಕೆ, ಟಿಪ್ಪಣಿ ಯಾವಾಗಲೋ ಒಂದು ಬಾರಿಯಾದರೆ ಒಳ್ಳೆಯದು. ಯಡಿಯೂರಪ್ಪನವರ ಹೋರಾಟದಿಂದ ಬಿಜೆಪಿ ಸರ್ಕಾರ ಬಂದಿದೆ. ಸರ್ಕಾರ ರಚನೆ ವೇಳೆ ಯಡಿಯೂರಪ್ಪ ಬಿಟ್ಟರೆ ಇವರಾರೂ ಬಂದಿರಲಿಲ್ಲ. ಯಡಿಯೂರಪ್ಪ ಅವರನ್ನ ನಂಬಿ ಹದಿನೇಳು ಜನ ಬಂದಿದ್ದೇವೆ.
ಅದಕ್ಕೆ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಅದನ್ನು ಯತ್ನಾಳ್‌ರು ಅರಿತುಕೊಳ್ಳಲಿ. ಸುಮ್ಮನೆ ನಾಲಿಗೆ ಇದೆ ಅಂತಾ ಏನೇನೋ ಮಾತನಾಡಿದರೆ ಸರಿಯಲ್ಲ. ಯತ್ನಾಳ್ ಅವರನ್ನ ಕರೆದುಕೊಂಡು ಬಂದಿದ್ದು ಕೂಡ ಯಡಿಯೂರಪ್ಪನವರೇ, ಅದನ್ನು ಅವರು ಅರ್ಥ ಮಾಡಿಕೊಳ್ಳಲಿ ಎಂದರು.