ದಾವಣಗೆರೆ: ಶಿಕ್ಷಕರನ್ನ ನೇಮಕಾತಿ ಮಾಡಿದ್ದು, ಮಕ್ಕಳಿಗೆ ಪಾಠ ಮಾಡಲಿಕ್ಕೆ ಹೊರತು ಸಂಸಾರ ನೋಡಿಕೊಳ್ಳೋಕೆ ಅಲ್ಲ ಎಂದು ಸಚಿವ ಬಿ.ಸಿ ನಾಗೇಶ್ ಕಿಡಿಕಾರಿದ್ದಾರೆ. ಶಿಕ್ಷಕರ ವರ್ಗಾವಣೆಗೆ ಸರ್ಕಾರ ಕೈಗೊಂಡಿರುವ ಕ್ರಮದಿಂದ ಶಿಕ್ಷಕರು ಪರದಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ ಈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳಲಗೇರೆ ಗ್ರಾಮದಲ್ಲಿ ಮಾತನಾಡಿದ ಅವರು, ಮೂರು ವರ್ಷದಿಂದ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಎರಡು ದಿನದಿಂದ ಮತ್ತೆ ಶುರುವಾಗಿದ್ದು, ಎಲ್ಲ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದರು.
ಕೆಲ ಶಿಕ್ಷಕರ ವೈಯುಕ್ತಿಕ ಸಮಸ್ಯೆಗಳನ್ನ ಸಾಮೂಹಿಕ ಎಂದು ಬಿಂಬಿಸಲಾಗದು. ಕೆಲ ಶಿಕ್ಷಕರಿಗೆ ಕೆಲಸಕ್ಕೆ ಸೇರುವಾಗ ಜಿಲ್ಲಾವಾರು ಆಯ್ಕೆ ಎಂದು ಗೊತ್ತಿರಲಿಲ್ಲವೇ?. ಆಗ ರಾಯಚೂರು, ಮತ್ತೊಂದು ಜಿಲ್ಲೆ ದೂರ ಅಂತಾ ಗೊತ್ತಿರಲಿಲ್ವಾ ಎಂದು ಪ್ರಶ್ನಿಸಿದರು. ಎಲ್ಲರ ಸಮಸ್ಯೆ ಅರ್ಥ ಆಗುತ್ತದೆ. ಆದರೆ, ಶಿಕ್ಷಕರ ಸಮಸ್ಯೆಗಿಂತ ಮೊದಲು ಮಕ್ಕಳ ಸಮಸ್ಯೆ ಬಗೆಹರಿಸಬೇಕಿದೆ. ಬಳಿಕ ಜಿಲ್ಲಾವಾರು ಶಿಕ್ಷಕರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ:
ಶಿಕ್ಷಣ ವ್ಯವಸ್ಥೆಗೆ ಕೋವಿಡ್ ಸವಾಲಾಗಿದ್ದು, ಕೇಂದ್ರ, ರಾಜ್ಯ ಸರ್ಕಾರ ಹೆಚ್ಚಿನ ನಿಗಾ ವಹಿಸುತ್ತಿದೆ. ಕೋವಿಡ್ 3ನೇ ಅಲೆ ಪರಿಣಾಮ ಬೀರಿದರೆ ಶಾಲೆ ನಿಲ್ಲಿಸಬೇಕಾ ಅಥವಾ ಬೇಡ್ವಾ ಆಮೇಲೆ ನಿರ್ಧಾರ ಮಾಡಲಾಗುತ್ತದೆ. ಸದ್ಯಕ್ಕೆ ಯಾವೂದೇ ತೊಂದರೆ ಇಲ್ಲದೇ ಶಾಲೆ ಪ್ರಾರಂಭ ಆಗಿದೆ ಎಂದರು.