ದಾವಣಗೆರೆ :ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕೆ ಹೊಸ ನಿದರ್ಶನ ದಾವಣಗೆರೆಯ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಕಾಣಸಿಕ್ಕಿದೆ. ಸರೋಜ ಪಾಟಿಲ್ ಎಂಬ ಮಹಿಳೆ ಸಿರಿಧಾನ್ಯಗಳ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆಯವರೆಗೆ ತಲುಪಿಸಿ ಉದ್ಯಮದಲ್ಲಿ ಯಶ ಕಂಡಿದ್ದಾರೆ.
ನಿಟ್ಟೂರು ಗ್ರಾಮದ ನಿವಾಸಿಯಾದ ಇವರು ಕೃಷಿ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಆರಂಭದಲ್ಲಿ ದೇಶಿಯ ಭತ್ತ ಬೆಳೆಯುತ್ತಿದ್ದ ಸರೋಜ ಹಂತ ಹಂತವಾಗಿ ಸಿರಿಧಾನ್ಯಗಳನ್ನೂ ಬೆಳೆಯಲು ಆರಂಭಿಸಿದ್ದಾರೆ. ಇವರ ಸಿರಿಧಾನ್ಯ ಬೆಳೆಯುವ ಆಸಕ್ತಿಗೆ ಸಹಕರಿಸಿದ್ದು ಕೃಷಿ ಇಲಾಖೆ ಹಾಗು ತರಳಬಾಳು ಕೃಷಿ ಕೇಂದ್ರ.
ಸಾಕಷ್ಟು ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದ ಸರೋಜರಿಗೆ ಮೊದಮೊದಲು ತಾನು ಬೆಳೆದಿದ್ದ ಬೆಳೆಯನ್ನು ಏನು ಮಾಡಬೇಕೆಂದೇ ಯೋಚನೆಯಾಗಿತ್ತು. ಇದಕ್ಕಾಗಿ ಸಣ್ಣ ಪ್ರಮಾಣದಲ್ಲಿ ಉತ್ಪನ್ನಗಳನ್ನು ತಯಾರು ಮಾಡಿ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರು. ಇದು ಹಂತಹಂತವಾಗಿ ಬೆಳೆದು ಇದೀಗ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟ ತಲುಪಿದೆ. ಇವರು ತದ್ವನಂ ಎಂಬ ಬ್ರ್ಯಾಂಡ್ ಮಾಡಿಕೊಂಡು 2004 ರಿಂದ ಉದ್ಯಮ ನಡೆಸಿಕೊಂಡು ಬರುತ್ತಿದ್ದಾರೆ.
ಒಬ್ಬರಿಂದ ಆರಂಭವಾದ ಉದ್ಯಮ ಈಗ 8 ಕುಟುಂಬಕ್ಕೆ ಕೆಲಸ ನೀಡುತ್ತಿದೆ. ಸಿರಿಧಾನ್ಯಗಳಿಂದ ಎನರ್ಜಿ ಮಿಕ್ಸ್, ರಾಗಿ ಬಳಕೆ ಮಾಡಿ ರಾಗಿ ಮಾಲ್ಟ್, ವಡ್ಡರಾಗಿ ಹಿಟ್ಟು, ಹಪ್ಪಳಗಳನ್ನು ಕೂಡ ತಯಾರು ಮಾಡುತ್ತಿದ್ದಾರೆ. ಇದೇ ಸಿರಿಧಾನ್ಯಗಳಿಂದ 9 ತರಹದ ಶ್ಯಾವಿಗೆ, ಬಾಳೆಕಾಯಿ ಹುಡಿ, ಸಿರಿಧಾನ್ಯ ಅವಲಕ್ಕಿ, ಕಾಕ್ರಸ್ ಹೀಗೆ ಸಾಕಷ್ಟು ಉತ್ಪನ್ನಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.