ದಾವಣಗೆರೆ :ಉತ್ತಮ ಮಳೆಯಾಗುತ್ತಿರುವ ಕಾರಣ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯಲ್ಲಿಯೂ ಅಧಿಕಾರಿಗಳು ಸನ್ನದ್ಧರಾಗುವಂತೆ ಸಂಸದ ಜಿ.ಎಂ.ಸಿದ್ದೇಶ್ವರ್ ಸೂಚನೆ ನೀಡಿದ್ದಾರೆ.
ಗೂಗಲ್ ಮೀಟ್ ಆ್ಯಪ್ ಮೂಲಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಅದರೊಂದಿಗೆ ಹೆಚ್ಚು ಮಳೆಯಾಗುತ್ತಿರುವುದರಿಂದ ಎರಡೂ ಪರಿಸ್ಥಿತಿಗಳನ್ನು ಒಟ್ಟಾಗಿ ನಿಭಾಯಿಸಬೇಕಾಗಿದೆ. ಈಗಾಗಲೇ ತುಂಗಾನದಿಗೆ ಸಾಕಷ್ಟು ನೀರು ಬಂದಿದ್ದು ಕೆಲವೇ ದಿನಗಳಲ್ಲಿ ಭದ್ರಾ ನೀರು ಕೂಡಾ ಸೇರಲಿದೆ. ಹಾಗಾಗಿ, ನದಿದಂಡೆ ಮತ್ತು ನದಿಪಾತ್ರದಲ್ಲಿರುವ ಜನ-ಜಾನುವಾರುಗಳು ಪ್ರವಾಹಕ್ಕೆ ಒಳಗಾಗುವ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಪ್ರವಾಹಕ್ಕೆ ಸಿಲುಕುವ ಕುಟುಂಬಗಳನ್ನು ತಕ್ಷಣ ಸ್ಥಳಾಂತರಿಸಿ ಅವರನ್ನು ಕಾಳಜಿ ಕೇಂದ್ರಗಳಿಗೆ ಕಳುಹಿಸಬೇಕು. ಈ ಹಿಂದಿನ ದಿನಗಳಲ್ಲಿ ಪ್ರವಾಹ ಊಂಟಾದರೆ ಕಾಳಜಿ ಕೇಂದ್ರಗಳನ್ನು ಮಾಡಿದಂತೆ ಈಗ ಮಾಡಲು ಬರುವುದಿಲ್ಲ. ಏಕೆಂದರೆ ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಮುಖ್ಯವಾಗಿರುವುದರಿಂದ ಸುಸಜ್ಜಿತ ಸ್ಥಳಗಳನ್ನು ಗುರುತಿಸಬೇಕು. ಸಮುದಾಯ ಭವನ, ಹಜ್ ಭವನ, ಗುರು ಭವನಗಳನ್ನು ಗುರುತಿಸಿ ಒಂದೇ ಕಡೆ ಅಡುಗೆ ವ್ಯವಸ್ಥೆ ಮಾಡಿ ಅಲ್ಲಿಂದ ಚಿಕ್ಕ ಚಿಕ್ಕ ವಾಹನಗಳ ಮೂಲಕ ಆಹಾರ ಮತ್ತು ನೀರು ಸರಬರಾಜು ಮಾಡಬೇಕೆಂದರು.