ದಾವಣಗೆರೆ: ನೊಣಗಳ ಉಪಟಳದಿಂದ ಬೇಸತ್ತಿರುವ ದಾವಣಗೆರೆ ತಾಲೂಕಿನ ಹತ್ತೂರು ಗ್ರಾಮಕ್ಕೆ ತಕ್ಕಮಟ್ಟಿಗೆ ಮುಕ್ತಿ ಸಿಕ್ಕಂತಾಗಿದೆ. 'ದಾವಣಗೆರೆಯ ಗ್ರಾಮಗಳಲ್ಲಿ ಹೆಚ್ಚಾಯಿತು ನೊಣಗಳ ಉಪಟಳ ಆತಂಕದಲ್ಲಿ ಜನ' ಶೀರ್ಷಿಕೆಯಡಿಯಲ್ಲಿ ಈಟಿವಿ ಭಾರತ್ ಜುಲೈ 29 ರಂದು ವರದಿ ಮಾಡಿತ್ತು. ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಹೆಬ್ಬಾಳು ಗ್ರಾಮ ಪಂಚಾಯತಿ ಸಿಬ್ಬಂದಿ ನೊಣಗಳ ಸಮಸ್ಯೆಗೆ ಮುಕ್ತಿ ನೀಡಲು ಗ್ರಾಮಗಳಿಗೆ ಭಾನುವಾರ ಔಷಧಿ ಸಿಂಪಡಣೆ ಮಾಡಿದ್ದಾರೆ.
ಔಷಧಿ ಸಿಂಪಡಣೆ ಮಾಡಿದ್ರೆ ಕೆಲ ಹೊತ್ತು ಮಾತ್ರ ನೊಣಗಳ ಕಾಟ ದೂರವಾಗ್ಬಹುದು. ಆದರೆ ಈ ಸಮಸ್ಯೆಗೆ ಶಾಶ್ವತ ಮುಕ್ತಿ ಕಲ್ಪಿಸಬೇಕಾಗಿದೆ ಎಂಬುದು ಗ್ರಾಮಸ್ಥರ ಕೂಗಾಗಿದೆ. ಈ ಸಮಸ್ಯೆ ಬಗ್ಗೆ ಸುದ್ದಿ ಮಾಡಿದ್ದ ಈಟಿವಿ ಭಾರತ್ ವರದಿಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ದಾವಣಗೆರೆ ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ನೊಣಗಳ ಹಾವಳಿ ಮಿತಿಮೀರಿತ್ತು. ದಿನ ಬೆಳಗಾದ್ರೆ ಈ ಕೋಳಿ ಫಾರಂಗಳಿಂದ ನೇರವಾಗಿ ಗ್ರಾಮಗಳಿಗೆ ರಾಶಿ ರಾಶಿ ನೊಣಗಳು ದಾಂಗುಡಿ ಇಡುತ್ತಿದ್ದವು. ಇದರಿಂದ ರೋಗರುಜಿನಗಳು ಬರಬಹುದೆಂದು ಇಡೀ ಹತ್ತೂರಿನ ಜನರು ಆತಂಕದಲ್ಲೇ ಕಾಲಕಳೆಯುತ್ತಿದ್ದರು. ಆದ್ರೇ ಇದೀಗ ಔಷಧಿ ಸಿಂಪಡಣೆ ಮಾಡಿದ್ದರಿಂದ ತಕ್ಕಮಟ್ಟಿಗೆ ಆತಂಕ ದೂರವಾಗಿದೆ.
ದಾವಣಗೆರೆ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹುಣಸೆಕಟ್ಟೆ, ಮಂಡ್ಲೂರು, ಹೆಬ್ಬಾಳು, ಲಕ್ಕಮುತ್ತೇನ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಬದುಕು ನೊಣಗಳ ಕಾಟದಿಂದ ಅಯೋಮಯವಾಗಿತ್ತು. ಹೆಬ್ಬಾಳು ಗ್ರಾಪಂ ವ್ಯಾಪ್ತಿಯಲ್ಲಿ ಏಳಕ್ಕೂ ಹೆಚ್ಚು ಕೋಳಿ ಫಾರಂ ಗಳಿದ್ದು, ಅಲ್ಲಿ ಕೋಳಿ ಸಾಕಾಣಿಕೆ ಮಾಡಲಾಗುತ್ತಿದ್ದರಿಂದ ಈ ನೊಣಗಳ ಸಮಸ್ಯೆ ಉಲ್ಬಣವಾಗಿದೆ. ನೊಣಗಳ ಬಗ್ಗೆ ವಿಸ್ತೃತವಾಗಿ ಸುದ್ದಿ ಮಾಡಲಾಗಿತ್ತು. ಈಟಿವಿ ಭಾರತ ವರದಿಯಿಂದ ಎಚ್ಚೆತ್ತುಕೊಂಡ ಹೆಬ್ಬಾಳು ಗ್ರಾ.ಪಂ ಸಿಬ್ಬಂದಿ ಟ್ಯಾಂಕರ್ ನಲ್ಲಿ ಔಷಧಿ ತರಿಸಿ ಹುಣಸೆಕಟ್ಟೆ, ಲಕ್ಕ ಮುತ್ತೇನಹಳ್ಳಿ ಮತ್ತು ನೀರ್ಥಡಿ ಗ್ರಾಮದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿರುವುದರಿಂದ ಜನ ಈಟಿವಿ ಭಾರತ್ಗೆ ಧನ್ಯವಾದ ಹೇಳಿದ್ದಾರೆ.