ದಾವಣಗೆರೆ: ಶಿಷ್ಯ ವೇತನಕ್ಕೆ ಒತ್ತಾಯಿಸಿ ನಗರದ ಜಯದೇವ ವೃತ್ತದಲ್ಲಿ ಮೆಡಿಕಲ್ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ತೀವ್ರ ಸ್ವರೂಪ ಪಡೆದಿದೆ.
ಬೇಡಿಕೆ ಈಡೇರುವವರೆಗೆ ಸ್ಥಳದಿಂದ ಹೋಗಲ್ಲ ಎಂದು ಜೆಜೆಎಂ ಮೆಡಿಕಲ್ ಕಾಲೇಜಿನ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಪಟ್ಟು ಹಿಡಿದರು. ಈ ವೇಳೆ ಸ್ಥಳಕ್ಕೆ ಡಿಸಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ಹನುಮಂತರಾಯ, ತಹಶೀಲ್ದಾರ್ ಗಿರೀಶ್ ಬಂದು ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಕಳೆದ ಹದಿನಾರು ತಿಂಗಳಿನಿಂದ ಶಿಷ್ಯ ವೇತನ ನೀಡದ ಕಾರಣ ವೈದ್ಯರು ಹಾಗೂ ವಿದ್ಯಾರ್ಥಿಗಳು ನಿತ್ಯವೂ ಕಷ್ಟ ಅನುಭವಿಸುವಂತಾಗಿದೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಗಮನ ಸೆಳೆದಿದ್ದರೂ ಕೇವಲ ಭರವಸೆ ಸಿಕ್ಕಿದ್ದು ಅನುಷ್ಠಾನಕ್ಕೆ ಬಂದಿಲ್ಲ. ಹಾಗಾಗಿ ಶಿಷ್ಯ ವೇತನ ನೀಡುವ ಬಗ್ಗೆ ಲಿಖಿತವಾಗಿ ಬರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ತೀವ್ರ ಸ್ವರೂಪ ಪಡೆದ ಮೆಡಿಕಲ್ ವಿದ್ಯಾರ್ಥಿಗಳ ಪ್ರತಿಭಟನೆ ವಿದ್ಯಾರ್ಥಿಗಳ ಹೋರಾಟ ತೀವ್ರಗೊಳ್ಳುವ ಸೂಚನೆ ಅರಿತ ಪೊಲೀಸ್ ಅಧಿಕಾರಿಗಳು ವಾಹನ ಹಾಗೂ ಸಿಬ್ಬಂದಿ ಜೊತೆ ಆಗಮಿಸಿದರು. ಪ್ರತಿಭಟನಾಕಾರರನ್ನು ಬಂಧಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಎಸ್‌ಐ, ಸರ್ಕಲ್ ಇನ್ಸ್‌ಪೆಕ್ಟರ್, ಡಿವೈಎಸ್ಪಿ, ಎಎಸ್ಪಿ, ಮಹಿಳಾ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಮುಷ್ಕರ ವಾಪಸ್ ಪಡೆಯದಿದ್ದರೆ ಕ್ರಮದ ಎಚ್ಚರಿಕೆ ನೀಡಿದ ಡಿಸಿ, ಎಸ್ಪಿ
ವೈದ್ಯರು ಹಾಗೂ ವಿದ್ಯಾರ್ಥಿಗಳು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ವೇಳೆ ಅವರು ಜನರಿಗೆ ಎಲ್ಲಿಯೂ ತೊಂದರೆ ಆಗದಂತೆ ಕಾರ್ಯನಿರ್ವಹಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿಯೂ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಜಿಲ್ಲಾಡಳಿತ ನಿಮ್ಮ ಪರವಾಗಿದೆ. ಪ್ರತಿಭಟನೆ ಕೈಬಿಟ್ಟು ವ್ಯವಸ್ಥೆಯ ಮೇಲೆ ನಂಬಿಕೆ ಇಡಿ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ ಎಂಬ ಭರವಸೆ ನೀಡಿದರು. ಆಗ ಪ್ರತಿಭಟನಾಕಾರರು ಈ ಭರವಸೆಯನ್ನು ಲಿಖಿತ ರೂಪದಲ್ಲಿ ನೀಡಿ. ಇಲ್ಲಿಂದ ನಾವು ಹೋಗುತ್ತೇವೆ. ಇಲ್ಲದಿದ್ದರೆ ಮುಷ್ಕರ ಮುಂದುವರಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಎಸ್ಪಿ ಹನುಮಂತರಾಯ ಮಾತನಾಡಿ, ಜಿಲ್ಲಾಡಳಿತ ಸಹ ಈ ಬಗ್ಗೆ ಪ್ರಯತ್ನ ನಡೆಸುತ್ತಿದೆ. ಪ್ರತಿಭಟನೆ ಕೈಬಿಟ್ಟು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಿ. ನಿಮ್ಮ ಕಷ್ಟವೂ ನಮಗೆ ಅರ್ಥವಾಗುತ್ತದೆ. ಯಾರೂ ಕಾನೂನಿನ ವಿರುದ್ಧ ಹೋಗಬಾರದು. ಇಲ್ಲದಿದ್ದರೆ ನಾವು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದಾದ ಬಳಿಕವೂ ವಿದ್ಯಾರ್ಥಿಗಳು ಪಟ್ಟು ಬಿಡಲಿಲ್ಲ. ಕೊರೊನಾದಂತಹ ವೇಳೆಯಲ್ಲಿ ಯಾವುದೇ ತೊಂದರೆ ಮಾಡದೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಅಲ್ಲಿ ಕೆಲಸ ಮಾಡಿದ ಬಳಿಕ ಪ್ರತಿಭಟನೆಗೆ ಬರುತ್ತಿದ್ದೇವೆ. ಎಲ್ಲಾ ವಿದ್ಯಾರ್ಥಿಗಳು ಶ್ರೀಮಂತರಲ್ಲ, ಬಡ ಹಾಗೂ ಮಧ್ಯಮ ವರ್ಗದವರು ಇದ್ದಾರೆ. ಕಾಲೇಜು ಶುಲ್ಕ, ಮೆಸ್ ಬಿಲ್, ಪೆಟ್ರೋಲ್‌ಗೂ ಹಣ ಇಲ್ಲದೇ ಪರದಾಡುತ್ತಿದ್ದೇವೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ. ನಮಗೆ ಶಿಷ್ಯವೇತನ ನೀಡುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಹೇಳಿದ್ದಾರೆ.