ದಾವಣಗೆರೆ :ಉಪ್ಪಿನಕಾಯಿ ಕೇಳುವ ನೆಪದಲ್ಲಿ ಮಹಿಳೆಯ ಕೆನ್ನೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಪರಾರಿಯಾಗಿದ್ದು, ಆತನನ್ನು ಬಂಧಿಸುವಂತೆ ಮಹಿಳೆಯರು ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಮಂಜಪ್ಪ ಡಿ. ಹೆಚ್ (48), ಉಪ್ಪಿನಕಾಯಿ ಕೇಳುವ ನೆಪದಲ್ಲಿ ಮಹಿಳೆಯ ಗಲ್ಲ ಕಚ್ಚಿ ತಲೆಮರೆಸಿಕೊಂಡಿರುವ ಆರೋಪಿ ಎಂಬುದಾಗಿ ತಿಳಿದುಬಂದಿದೆ.
ಈ ಘಟನೆ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ಗ್ರಾಮವೊಂದರ ಮಹಿಳೆಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದರು. ಮಹಿಳೆಯ ಗಲ್ಲ ಕಚ್ಚಿದ್ದ ಘಟನೆ ಹದಿನೈದು ದಿನಗಳ ಹಿಂದೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿತ್ತು. ಮನೆಯಲ್ಲಿ ಒಬ್ಬಳೇ ಇರುವುದನ್ನ ಗಮನಿಸಿದ ಆರೋಪಿ ಮಂಜಪ್ಪ ಹೆಚ್ ಡಿ, ಮೊದಲು ಗಲ್ಲ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಗಾಯಾಳು ಮಹಿಳೆ ಆರೋಪ ಮಾಡಿದ್ದಾರೆ.
ಇನ್ನು ಗಲ್ಲ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿ ತಲೆಮರೆಸಿಕೊಂಡ ಆರೋಪಿ ಮಂಜಪ್ಪ ಡಿ. ಹೆಚ್ (48) ಬಂಧನಕ್ಕೆ ಆಗ್ರಹಿಸಿ ಹತ್ತಾರು ಮಹಿಳೆಯರು ಪ್ರತಿಭಟನೆ ನಡೆಸಿ, ಪ್ರಕರಣ ದಾಖಲಾಗಿ ಹಲವು ದಿನಗಳೇ ಉರುಳಿದರೂ ಕ್ರಮಜರುಗಿಸದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿ ಫೋಟೋ ಹಿಡಿದು ನ್ಯಾಯ ಕೊಡಿಸುವಂತೆ ಆಗ್ರಹಿಸಿದರು. ಎಸ್ಪಿ ಉಮಾ ಪ್ರಶಾಂತ್ಗೆ ಮನವಿ ನೀಡಿದ ಪ್ರತಿಭಟನಾನಿರತ ಮಹಿಳೆಯರೊಂದಿಗೆ ಮಾತನಾಡಿ, ಆದಷ್ಟು ಬೇಗ ಆರೋಪಿಯನ್ನ ಬಂಧಿಸುವ ಭರವಸೆ ನೀಡಿದರು.