ದಾವಣಗೆರೆ:ಕಳೆದಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯಲ್ಲಿ ಮದ್ರಾಸ್ ಐ ವೈರಸ್ ಸೋಂಕು ಹರಡುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲಾಸ್ಪತ್ರೆಗೆ ದಿನನಿತ್ಯ ಕಡಿಮೆ ಎಂದರೂ 30ರಿಂದ 40 ಮದ್ರಾಸ್ ಐ ವೈರಸ್ ಸೋಂಕಿತ ಮಕ್ಕಳು, ವಯಸ್ಕರು ಚಿಕಿತ್ಸೆಗೆಂದು ಭೇಟಿ ನೀಡುತ್ತಿದ್ದಾರೆ.
ಕಣ್ಣಿನ ಸೋಂಕು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಮುಂಜಾಗ್ರತೆ ಕ್ರಮಗಳು ಅಗತ್ಯ ಎನ್ನುತ್ತಾರೆ ವೈದ್ಯರು. ಕಣ್ಣಿನಲ್ಲಿ ಪಿಸುರು, ಊದಿಕೊಳ್ಳುವುದು, ಕೆಂಪಾಗುವುದು ಈ ವೈರಸ್ ಗುಣಲಕ್ಷಣಗಳು. ಹಲವು ದಿನಗಳಿಂದ ವಿಚಿತ್ರ ರೀತಿಯಲ್ಲಿ ಹರಡುತ್ತಿರುವ ಮದ್ರಾಸ್ ಐ ಶಾಲೆ, ಹಾಸ್ಟೆಲ್ ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಸೋಂಕಿತ ಮಕ್ಕಳನ್ನು ಒಂದು ವಾರ ಶಾಲೆ ಕಳುಹಿಸದಂತೆ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ ಸೂಚನೆ ನೀಡಿವೆ.
ನೇತ್ರ ತಜ್ಞರ ಮಾತು: ದಾವಣಗೆರೆ ಜಿಲ್ಲಾ ಸಿಜಿ ಆಸ್ಪತ್ರೆಯ ನೇತ್ರ ತಜ್ಞ ಡಾ.ಎಸ್.ಎಸ್.ಕೋಳಕೂರ್ ಮಾತನಾಡಿ, "ಇದೊಂದು ಅಂಟು ರೋಗವಿದ್ದಂತೆ. ನಮ್ಮ ಜಿಲ್ಲಾಸ್ಪತ್ರೆಯ ಹೊರರೋಗಿಗಳ ಕಣ್ನು ವಿಭಾಗದಲ್ಲಿ ಇಲ್ಲಿಯತನಕ ಇಂಥ 600ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಮದ್ರಾಸ್ ಐ ಎಂದು ಕರೆಯುತ್ತೇವೆ. ಸೋಂಕು ತಗುಲಿದಾಗ ಕಣ್ಣು ಕೆಂಪಾಗುವುದು, ಕಣ್ಣು ಚುಚ್ಚುವುದು, ಮಂಜಾದಂತೆ ಕಾಣುವುದು ಹಾಗೂ ಕಣ್ಣಿನಲ್ಲಿ ಪಿಸು ಬರುವುದು ಸಾಮಾನ್ಯ ಲಕ್ಷಣಗಳಾಗಿವೆ" ಎಂದರು.
"ಜುಲೈ 17ರ ತನಕ ಜಿಲ್ಲೆಯಲ್ಲಿ ವಿಪರೀತ ಪ್ರಕರಣಗಳು ಕಂಡುಬಂದಿದ್ದು, ಇದೀಗ ಸ್ವಲ್ಪ ಇಳಿಮುಖವಾಗಿದೆ. ಮದ್ರಾಸ್ ಐ ವೈರಸ್‌ಪೀಡಿತ ವ್ಯಕ್ತಿ ಬಳಸುವ ವಸ್ತುಗಳನ್ನು ಬೇರೊಬ್ಬರು ಬಳಕೆ ಮಾಡಿದರೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು" ಎಂದು ತಿಳಿಸಿದ್ದಾರೆ.