ದಾವಣಗೆರೆ:ಬೆಳಕಿನ ಹಬ್ಬ ದೀಪಾವಳಿಯನ್ನು ದೇಶದೆಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೊಸ ಉಡುಗೆ ತೊಟ್ಟು, ಪಟಾಕಿ ಸಿಡಿಸಿ ಮನೆಮಂದಿಯೆಲ್ಲ ಒಟ್ಟಾಗಿ ಹಬ್ಬ ಆಚರಿಸುವುದು ಪದ್ಧತಿ. ಆದರೆ, ಜಿಲ್ಲೆಯ ಲೋಕಿಕೆರೆ ಗ್ರಾಮಸ್ಥರು ಮಾತ್ರ ದೀಪಾವಳಿ ಹಬ್ಬವನ್ನು ಆಚರಿಸುವುದಿಲ್ಲ.
ಕಳೆದೆರಡು ಶತಮಾನಗಳಿಂದ ಈ ಊರ ಜನರು ದೀಪಾವಳಿ ಹಬ್ಬ ಆಚರಿಸುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಹಿಂದೆ ಹಬ್ಬದ ದಿನ ಕೆಡುಕು ಸಂಭವಿಸಿದ ಹಿನ್ನೆಲೆಯಲ್ಲಿ ದೀಪಾವಳಿ ಆಚರಿಸುವುದನ್ನು ಕೈಬಿಟ್ಟಿದ್ದಾರೆ. ಹಬ್ಬದ ಸಂದರ್ಭದಲ್ಲಿ ಯಾವುದೇ ಶುಭ ಕಾರ್ಯವನ್ನೂ ಕೈಗೊಳ್ಳದೇ ತಲೆತಲಾಂತರಗಳಿಂದಲೂ ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಬರಲಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಪರಿಶಿಷ್ಟ ಸಮುದಾಯದವರು, ನಾಯಕರು ಹಾಗೂ ಕುರುಬರೇ ಹೆಚ್ಚಿರುವ ಈ ಗ್ರಾಮದಲ್ಲಿ ದೀಪಾವಳಿ ಹಬ್ಬಾಚರಣೆ ಮಾಡುವ ಬದಲು ಕರಾಳ ದಿನ ಆಚರಿಸಲಾಗುತ್ತದೆ!. ಸುಮಾರು ಎರಡು ನೂರಕ್ಕೂ ಹೆಚ್ಚು ವರ್ಷಗಳಿಂದ ಈ ಪದ್ದತಿಯನ್ನು ಗ್ರಾಮದ ಹಿರಿಯರು ನಡೆಸಿಕೊಂಡು ಬರುತ್ತಿದ್ದಾರೆ. ಕೆಲವರು ಗ್ರಾಮದ ಆಂಜನೇಯನ ತೇರಿನ ಸಮಯ ಹಾಗೂ ಇನ್ನೂ ಕೆಲವರು ವಿಜಯದಶಮಿ ಸಂದರ್ಭದಲ್ಲಿ, ಮತ್ತಷ್ಟು ಜನರು ಮಹಾಲಯ ಅಮಾವಾಸ್ಯೆ ದಿನ ಹಿರಿಯರ ಹಬ್ಬ ನೆರವೇರಿಸುತ್ತಾರೆ. ಆ ಸಮಯದಲ್ಲಿ ದೀಪಾವಳಿ ರೀತಿಯೇ ಹಬ್ಬಾಚರಣೆ ಮಾಡುತ್ತಾರೆ. ಇದನ್ನು ಹೊರತುಪಡಿಸಿ ದೀಪಾವಳಿ ದಿನದಂದು ಹಬ್ಬ ಆಚರಿಸಿದರೆ, ಕೆಡುಕಾಗುವುದೇ ಹೆಚ್ಚು ಎನ್ನುವುದು ಗ್ರಾಮಸ್ಥರ ನಂಬಿಕೆ. ದೀಪಾವಳಿ ಹಬ್ಬದ ವೇಳೆ ಆಚರಣೆಗಳನ್ನು ಕೈಬಿಟ್ಟು, ಬೇರೆ ಊರುಗಳಲ್ಲಿ ನೆಲೆಸಿರುವ ಸಂಬಂಧಿಕರ ಮನೆಗಳಿಗೆ ತೆರಳಿ ಊಟ, ಉಪಚಾರ ಮಾಡಿಕೊಂಡು ಬರುತ್ತಾರೆ. ಆದ್ರೆ, ಲೋಕಿಕೆರೆ ಗ್ರಾಮದಲ್ಲಿ ಮಾತ್ರ ದೀಪಾವಳಿ ಆಚರಿಸುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.