ದಾವಣಗೆರೆ:ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ನಡೆಸಿದ ವೇಳೆ ಸತತ 10ಕ್ಕೂ ಹೆಚ್ಚು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರ ನಿವಾಸದಲ್ಲಿ ಒಟ್ಟು 16.5 ಲಕ್ಷ ನಗದು, 2,800 ಗ್ರಾಂ ಚಿನ್ನ ಹಾಗೂ 20 ಕೆಜಿ ಬೆಳ್ಳಿ ಹಾಗೂ ಅಪಾರ ಪ್ರಮಾಣದ ಆಸ್ತಿ ದಾಖಲೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಸ್ವೀಕರಿಸುತ್ತಿರುವಾಗ ಸಿಕ್ಕಿಬಿದ್ದ ಬೆನ್ನಲ್ಲೇ ಚನ್ನಗಿರಿಯಲ್ಲೂ ಲೋಕಾಯುಕ್ತರು ದಾಳಿ ನಡೆಸಿದ್ದರು.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ 20ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ರಾತ್ರಿ ತನಕ ಪರಿಶೀಲನೆ ನಡೆಸಿದ್ದಾರೆ. ಇದಕ್ಕೂ ಮುನ್ನ ಲೋಕಾಯುಕ್ತ ಅಧಿಕಾರಿಗಳು ಚನ್ನಗಿರಿ ತಾಲೂಕಿನ ಮಾವಿನಹೊಳೆ ಬಳಿಯ ಶಾಸಕ ವಿರೂಪಾಕ್ಷಪ್ಪನವರ ಕುಟುಂಬಕ್ಕೆ ಸೇರಿದ ಕ್ರಶರ್, ಕಚೇರಿ ಹಾಗೂ ಮಾವಿನಕಟ್ಟಿ ಬಳಿಯ ಮಾಡಾಳ್ ಕುಟುಂಬದ ತೋಟ ಹಾಗೂ ಖೇಣಿ ಮನೆಯಲ್ಲಿ ಶೋಧ ನಡೆಸಿದ್ದರು.
ಸತತ ಹತ್ತು ಗಂಟೆಗಳ ಕಾಲ ಮಾಡಾಳ್ ಮನೆ ಶೋಧ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅಲ್ಲಿ ದೊರೆತ ನಗದು, ಚಿನ್ನ, ಬೆಳ್ಳಿ ಹಾಗೂ ಆಸ್ತಿ ಪತ್ರಗಳನ್ನು ಪಟ್ಟಿ ಮಾಡಿ ವಶಪಡಿಸಿಕೊಂಡಿದ್ದಾರೆ. ಬಳಿಕ ಮನೆಯಲ್ಲಿರುವ ಶಾಸಕ ಮಾಡಾಳ್ ಪತ್ನಿ ಲೀಲಾವತಿ ಅವರಿಗೆ ಪಟ್ಟಿಯ ಪ್ರತಿ ನೀಡಿ ಲೋಕಾಯುಕ್ತ ಪೊಲೀಸರು ಸಹಿ ಪಡೆದಿದ್ದಾರೆ. 16.5 ಲಕ್ಷ ನಗದು, 2,800 ಗ್ರಾಂ ಚಿನ್ನ ಹಾಗೂ 20 ಕೆಜಿ ಬೆಳ್ಳಿ ಹಾಗೂ ಅಪಾರ ಪ್ರಮಾಣದ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.