ಬೆಂಗಳೂರು/ದಾವಣಗೆರೆ/ಕೊಡಗು/ಕೊಪ್ಪಳ : ರಾಜ್ಯದ ವಿವಿಧೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ ಹುದ್ದೆಯಲ್ಲಿರುವ ದಂಪತಿ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ.ಮಹೇಶ್ ಹಾಗೂ ಅವರ ಪತ್ನಿ ಬಿಬಿಎಂಪಿ ಎಇ ಹೆಚ್. ಭಾರತಿ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.
ಚಿತ್ರದುರ್ಗ ಲೊಕಾಯುಕ್ತ ಎಸ್ಪಿ ವಾಸುದೇವ್ ರಾಮ್ ಹಾಗೂ ಡಿವೈಎಸ್ಪಿ ಮೃಂತುಂಜಯ್ಯ ನೇತೃತ್ವದ ತಂಡದಿಂದ ದಾವಣಗೆರೆ ನಗರದ ಜಯನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ.
ಚನ್ನಗಿರಿ ಅರಣ್ಯ ಇಲಾಖೆ ಆರ್.ಎಫ್.ಒ ಮನೆ ಮೇಲೂ ದಾಳಿ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಚನ್ನಗಿರಿ ಅರಣ್ಯ ಇಲಾಖೆ ಆರ್.ಎಫ್.ಒ ಸತೀಶ್ ಮನೆ ಮೇಲೆ ಮೊದಲು ದಾಳಿ ನಡೆಸಿದ ಅಧಿಕಾರಿಗಳು, ಬಳಿಕ ಶಿವಮೊಗ್ಗದಲ್ಲಿರುವ ನಿವಾಸದ ಮೇಲೂ ದಾಳಿ ಮಾಡಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಇನ್ಸ್‌ಪೆಕ್ಟರ್ ನಂದೀಶ್ ಹಾಗೂ ಮಧುಸೂಧನ್ ತಂಡದಿಂದ ಶೋಧ ಮಾಡಲಾಗುತ್ತಿದೆ.
ಬಿಬಿಎಂಪಿ ರೆವಿನ್ಯೂ ಇನ್ಸ್‌ಪೆಕ್ಟರ್ ಮನೆ ಮೇಲೆ ದಾಳಿ:ಬಿಬಿಎಂಪಿ ಮಹದೇವಪುರ ವಲಯದ ರೆವಿನ್ಯೂ ಇನ್ಸ್‌ಪೆಕ್ಟರ್ ನಟರಾಜ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ನಟರಾಜ್ ಅವರ ಬನಶಂಕರಿ ನಿವಾಸ, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿರುವ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ನಟರಾಜ್ ಮಾತ್ರವಲ್ಲದೇ ಬೆಂಗಳೂರಿನ ಹತ್ತಕ್ಕೂ ಹೆಚ್ಚು ಕಡೆ ವಿವಿಧ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
ಶಿವಮೊಗ್ಗ:ದಾವಣಗೆರೆ ಜಿಲ್ಲೆ ಚನ್ನಗಿರಿ ವಲಯ ಸಂರಕ್ಷಣಾಧಿಕಾರಿ ಸತೀಶ್ ಅವರ ಶಿವಮೊಗ್ಗದ ಮನೆ ಮೇಲೆಯೂ ದಾವಣಗೆರೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಡಾಲರ್ಸ್ ಕಾಲೋನಿಯ ವೃಷಾಭಾದ್ರಿ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿಗಳಿಕೆ ಆರೋಪದಡಿ ಸತೀಶ್ ರವರ ಚನ್ನಗಿರಿ ಅರಣ್ಯ ಇಲಾಖೆಯ ವಸತಿ ಗೃಹ ಸೇರಿದಂತೆ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಕೌಲಪುರೆ ಅವರ ಆದೇಶದ ಮೇರೆಗೆ ದಾವಣಗೆರೆಯ ಇಬ್ಬರು ಇನ್ಸಪೆಕ್ಟರ್ ಸೇರಿದಂತೆ 6 ಜನರ ತಂಡ ಎರಡು ವಾಹನದಲ್ಲಿ ಬಂದು ತಪಾಸಣೆ ನಡೆಸುತ್ತಿದ್ದಾರೆ.