ದಾವಣಗೆರೆ: ವಿಶೇಷ ಭೂಸ್ವಾಧೀನ ಅಧಿಕಾರಿ ಜಿ.ಡಿ.ಶೇಖರ್ ಹಾಗೂ ಕಚೇರಿ ವ್ಯವಸ್ಥಾಪಕ ಶ್ರೀನಿವಾಸ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು 30 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಭೂಸ್ವಾಧೀನ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.
ಹಾವೇರಿ ತಾಲೂಕಿನ ಕೊಳೂರು ಗ್ರಾಮದ ಸಂತೋಷ ಎಂಬುವವರು ನೀಡಿದ ದೂರಿನ ಮೇಲೆ ಲೋಕಾ ದಾಳಿ ನಡೆದಿದೆ. ದೂರುದಾರ ಸಂತೋಷ ಸೇರಿದಂತೆ ಹಲವರು ಜಮೀನು ಕಳೆದುಕೊಂಡಿದ್ದರು. ಅದರ ಪರಿಹಾರ ಹಣಕ್ಕಾಗಿ ಹಿರಿಯ ಕೆಎಎಸ್ ಅಧಿಕಾರಿ ಜಿ.ಡಿ ಶೇಖರ ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪರಿಹಾರ ಹಣ ಬಿಡುಗಡೆಗೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ಕಾರ್ಯಾಚರಣೆ ಮಾಡಿ ಬಲೆಗೆ ಬೀಳಿಸಿದ್ದಾರೆ.
ದಾವಣಗೆರೆ ವಿಶೇಷ ಭೂ ಸ್ವಾಧೀನ ಅಧಿಕಾರಿಯಾದ ಜಿ.ಡಿ.ಶೇಖರ್ ಅವರ ಕಾರ್ಯನಿರ್ವಹಣಾ ವ್ಯಾಪ್ತಿ ದಾವಣಗೆರೆ, ಹಾವೇರಿ ಸೇರಿ ಆರು ಜಿಲ್ಲೆಗಳವರೆಗೆ ಇತ್ತು. ಇನ್ನು ಈ ದಾಳಿ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ .ಕೌಲಾಪುರೆ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಆಂಜನೇಯ ಹಾಗೂ ರಾಷ್ಟ್ರತಿ ದಾಳಿ ನಡೆಸಿದರು. ಇಬ್ಬರು ಅಧಿಕಾರಿಗಳನ್ನ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಸಿಬಿ ರದ್ದು, ಲೋಕಾ ಮರು ಸ್ಥಾಪನೆ:ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಮರು ಸ್ಥಾಪನೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಆ ಬಳಿಕ ಸರ್ಕಾರ ಎಚ್ಚೆತ್ತುಕೊಂಡು, ಭ್ರಷ್ಟಾಚಾರ ನಿಗ್ರಹ ದಳ ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿತ್ತು. ಬಳಿಕ ಕರ್ನಾಟಕ ಲೋಕಾಯುಕ್ತ ಇಲಾಖೆಯನ್ನು ಮರು ಸ್ಥಾಪಿಸಿ ಸರ್ಕಾರ ಅಧಿಸೂಚನೆ ಪುನರುಜ್ಜೀವನಗೊಳಿಸಿತ್ತು. ಇದರಿಂದ ಬಲ ಕಳೆದುಕೊಂಡಿದ್ದ ಲೋಕಾಯುಕ್ತಕ್ಕೆ ಮತ್ತೆ ಬಲ ಸಿಕ್ಕಂತಾಗಿತ್ತು.