ದಾವಣಗೆರೆ:ಕೊರೊನಾ ವೈರಸ್ ನಿಯಂತ್ರಿಸಲು ರಾಜ್ಯದಲ್ಲಿ ಲಾಕ್‍ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿದ್ದು, ಈಗ ಕೆಲ ಸಡಿಲಿಕೆ ಮಾಡಲಾಗಿದೆ. ಆಯ್ದ ವಲಯಗಳಲ್ಲಿ ಕೆಲವು ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಜಿಲ್ಲೆಯ ಜನತೆ ಲಾಕ್‍ಡೌನ್ ವೇಳೆ ಸಮರ್ಪಕವಾಗಿ ನಿಯಮ ಪಾಲಿಸುವ ಮೂಲಕ ಸಹರಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಲಾಕ್‍ಡೌನ್ ಸಡಿಲಿಕೆ ಮಾರ್ಗಸೂಚಿಗಳ ಮಾಹಿತಿ ನೀಡಿ, ಜಿಲ್ಲೆಗೆ ಈ ಮಾರ್ಗಸೂಚಿಗಳು ಹೇಗೆ ಅನ್ವಯವಾಗುತ್ತವೆ ಎಂಬ ಬಗ್ಗೆ ವಿವರಣೆ ನೀಡಿದರು.
ಯಾವ್ಯಾವ ಸೇವೆ ಲಭ್ಯ?
ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಕ್ಲಿನಿಕ್, ಮೆಡಿಕಲ್ ಶಾಪ್, ಜನೌಷಧಿ ಕೇಂದ್ರಗಳು, ಲ್ಯಾಬ್‍ಗಳು, ಟೆಲಿ ಮೆಡಿಸಿನ್ ಸೌಲಭ್ಯಗಳು, ಫಾರ್ಮಾಸುಟಿಕಲ್‍ಗಳು, ಮೆಡಿಕಲ್ ರಿಸರ್ಚ್ ಲ್ಯಾಬ್‍ಗಳು, ಕೋವಿಡ್-19 ಸಂಶೋಧನೆ ಕೈಗೊಂಡಿರವ ಸಂಸ್ಥೆಗಳು, ಪಶು ಆಸ್ಪತ್ರೆಗಳು, ಚುಚ್ಚುಮದ್ದು ಮತ್ತು ಔಷಧಿ ಸರಬರಾಜು, ಕೋವಿಡ್-19 ಕಂಟೈನ್‍ಮೆಂಟ್‍ಗೆ ನೆರವು ನೀಡುತ್ತಿರುವ ಅಧಿಕೃತ ಖಾಸಗಿ ಸಂಸ್ಥೆಗಳು, ಹೋಮ್ ಕೇರ್ ಪ್ರೊವೈಡರ್ಗಳು, ರೋಗ ಪತ್ತೆ ಔಷಧಿ ಮತ್ತು ಮೆಡಿಕಲ್ ಆಕ್ಸಿಜನ್ ಮತ್ತು ಅವುಗಳ ಪ್ಯಾಕೇಜಿಂಗ್ ಸಾಮಗ್ರಿಗಳು, ಕಚ್ಚಾ ಸಾಮಗ್ರಿಗಳು, ವೈದ್ಯಕೀಯ, ಆರೋಗ್ಯ ಮೂಲ ಸೌಕರ್ಯ.
ಇದರ ಜೊತೆ ಎಲ್ಲಾ ವೈದ್ಯಕೀಯ, ಪಶುವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪ್ಯಾರಾ ಮೆಡಿಕಲ್, ಲ್ಯಾಬ್ ಟೆಕ್ನಿಷಿಯನ್, ಮಿಡ್‍ವೈಫ್ಸ್ ಮತ್ತು ಆಂಬುಲೆನ್ಸ್ ಸೇರಿದಂತೆ ಇತರೆ ವೈದ್ಯಕೀಯ ನೆರವು ಹಾಗೂ ಸೇವೆಗಳ ಅಂತರ್ ರಾಜ್ಯ ಮತ್ತು ರಾಜ್ಯದೊಳಗಿನ ಸೇವೆಗೆ ಅವಕಾಶ.
ಕೃಷಿ ಚಟುವಟಿಕೆ: ಎಲ್ಲಾ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿವೆ. ಕೃಷಿ ವಲಯದ ಕೃಷಿ ಚಟುವಟಿಕೆಗಳು, ಎಪಿಎಂಸಿಗಳು, ಕೃಷಿ ಉಪಕರಣಗಳ ಅಂಗಡಿಗಳು, ಬೀಜ, ಗೊಬ್ಬರ, ಕ್ರಿಮಿನಾಶಕ ಉತ್ಪಾದನಾ ಘಟಕಗಳು, ಸಿಹೆಚ್‍ಸಿ, ಹಾರ್ವೆಸ್ಟರ್ ಮತ್ತು ಇತರೆ ಕೃಷಿ ಮತ್ತು ತೋಟಗಾರಿಕೆ ಯಂತ್ರೋಪಕರಣಗಳಿಗೆ ವಿನಾಯಿತಿ. ಶೇ. 50ರಷ್ಟು ಕಾರ್ಮಿಕರೊಂದಿಗೆ ಟೀ, ಕಾಫಿ ಮತ್ತು ರಬ್ಬರ್ ಪ್ಲಾಂಟೇಷನ್, ಗೋಡಂಬಿ ಪ್ಲಾಂಟೇಷನ್ ಕೆಲಸ, ಸಂಸ್ಕರಣೆ, ಪ್ಯಾಕೇಜಿಂಗ್ ಮಾರುಕಟ್ಟೆಗೆ ಅವಕಾಶ.
ಪಶು ಸಂಗೋಪನೆ, ಪೌಲ್ಟ್ರಿ ಫಾರಂಗಳು, ಮೊಟ್ಟೆ ಕೇಂದ್ರಗಳ ಕಾರ್ಯಚಟುವಟಿಕೆ. ಮೆಕ್ಕೆಜೋಳ ಮತ್ತು ಸೋಯಾ ಸೇರಿದಂತೆ ಪಶು ಮೇವು ಸರಬರಾಜಿಗೆ ಅವಕಾಶ.
ಸಗಟು ವ್ಯಾಪಾರ, ಕಿರಾಣಿ ಅಂಗಡಿ, ಮಾಂಸದ ಅಂಗಡಿ, ಕೋರಿಯರ್, ಪಡಿತರ ಅಂಗಡಿಗಳು, ಹಣ್ಣು, ತರಕಾರಿ, ದಿನಸಿ, ಮಿಲ್ಕ್ ಬೂತ್‍ಗಳು, ಪೌಲ್ಟ್ರಿ, ಮೀನು, ಪಶುಗಳ ಮೇವು, ಅಂಚೆ, ಇ ಕಾಮರ್ಸ್, ರಸ್ತೆ, ಅತೀ ಸಣ್ಣ ಕೈಗಾರಿಕೆ ಸೇರಿ ಎಲ್ಲಾ ರೀತಿಯ ಕೈಗಾರಿಕಾ ಉತ್ಪಾದನಾ ವಲಯ, ಕಾಮಗಾರಿ ಸೇರಿದಂತೆ ಹಲವು ವಲಯಗಳಿಗೆ ವಿನಾಯಿತಿ ನೀಡಲಾಗಿದೆ.
ನಿಷೇಧಿಸಲ್ಪಟ್ಟ ಚಟುವಟಿಕೆಗಳು ಏನೇನು?
ಡೊಮೆಸ್ಟಿಕ್ ಮತ್ತು ಅಂತಾರಾಷ್ಟ್ರೀಯ ವೈಮಾನಿಕ ಪ್ರಯಾಣ ನಿಷೇಧ, ಟ್ರೈನ್ ಮತ್ತು ಸಾರ್ವಜನಿಕ ಬಸ್ ಸಾರಿಗೆ. ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಪ್ರವೇಶ ನಿಷೇಧ. ಎಲ್ಲಾ ಶೈಕ್ಷಣಿಕ, ತರಬೇತಿ, ಕೋಚಿಂಗ್ ಸಂಸ್ಥೆಗಳ ಚಟುವಟಿಕೆ ಬಂದ್. ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆ, ಟ್ಯಾಕ್ಸಿಗಳು, ರಿಕ್ಷಾ ಮತ್ತು ಕ್ಯಾಬ್ ಸೇವೆ, ಎಲ್ಲ ಸಿನಿಮಾ ಮಂದಿರ, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್‍ಗಳು, ಎಲ್ಲಾ ಧಾರ್ಮಿಕ ಸ್ಥಳಗಳು, ಸಾರ್ವಜನಿಕ ಸ್ಥಳಗಳ ಪ್ರವೇಶ ನಿಷೇಧ. ಅಂತ್ಯಕ್ರಿಯೆ ವೇಳೆ 20 ಜನರಿಗೆ ಮಾತ್ರ ಅವಕಾಶ. ಸ್ಥಳೀಯ ಪ್ರಾಧಿಕಾರ ಗುರುತಿಸಿರುವ ಕಂಟೈನ್‍ಮೆಂಟ್ ಝೋನ್‍ನಲ್ಲಿ ಮೇಲ್ಕಂಡ ಯಾವುದೇ ಚಟುವಟಿಕೆಗಳಿಗೆ ನಿರ್ಬಂಧ ಸಡಿಲಿಕೆ ಅನ್ವಯಿಸುವುದಿಲ್ಲ. ಯಾವುದೇ ವ್ಯಕ್ತಿ ಈ ಲಾಕ್‍ಡೌನ್ ನಿಯಮಗಳನ್ನು ಮೀರಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು.