ದಾವಣಗೆರೆ: ಖ್ಯಾತ ವೈದ್ಯೆ, ಸಾಹಿತಿ ಡಾ. ಗಿರಿಜಮ್ಮ(70)ನವರು ಇಂದು ಹೃದಾಯಾಘಾತದಿಂದ ನಗರದ ಎಸ್.ಎಸ್. ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಗಿರಿಜಮ್ಮನವರ ಅಗಲಿಕೆಯಿಂದ ವೈದ್ಯ ಹಾಗೂ ಸಾಹಿತ್ಯ ಲೋಕಕ್ಕೆ ಅಪಾರನಷ್ಟವಾಗಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛತೆಯ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಿ ರಾಜ್ಯದಲ್ಲೇ ಹೆಸರು ವಾಸಿಯಾಗಿದ್ದ ಇವರು, ಸಾಹಿತ್ಯ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ರಾಜಧಾನಿ ಬೆಂಗಳೂರಿನಲ್ಲಿ ಸತತ ಇಪ್ಪತು ವರ್ಷಗಳ ಕಾಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದರು.
ವೈದ್ಯ ವೃತ್ತಿಯ ಜೊತೆಗೆ ಕಿರುಚಿತ್ರ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಲೇಖನಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಬೆಳಕು ಮೂಡಿಸಿದ್ದರು. ಇವರ ಸೇವೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ', ಕನ್ನಡ ಸಾಹಿತ್ಯ ಪರಿಷತ್ 'ಬಿ. ಸರೋಜಾದೇವಿ ಸಾಹಿತ್ಯ ದತ್ತಿ ಪ್ರಶಸ್ತಿ', 'ಅನುಪಮಾ ಪ್ರಶಸ್ತಿ' ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಸಾಹಿತ್ಯದಲ್ಲಿ ಪರಿಣಿತರಾಗಿದ್ದ ಗಿರಿಜಮ್ಮ:ಸಾಹಿತ್ಯ ಕ್ಷೇತ್ರದಲ್ಲಿ ಹಿಡಿದ ಸಾಧಿಸಿದ್ದ ಗಿರಿಜಮ್ಮ ಅವರು ಮೊದಲಿಗೆ 'ಹೂಬಳ್ಳಿಗೆ ಈ ಆಸರೆ' ಎಂಬ ಕೃತಿಯನ್ನು ರಚಿಸಿದ್ದರು. ತಮಸೋಮ, ಚಂದಮಾಮ, ಅಂಬರತಾರೆ, ಜೋತಿರ್ಗಮಯ ಸೇರಿದಂತೆ ಒಟ್ಟು 27 ಕಾದಂಬರಿಗಳನ್ನು ಬರೆದಿದ್ದಾರೆ. ಇದಲ್ಲದೇ ಅರ್ಧಾಂಗಿ, ಅನಾವರಣ, ಸಂಜೆಮಲ್ಲಿಗೆ, ಅರ್ಧಾಂಗಿ ಸೇದಂತೆ 50 ಕಥೆಗಳನ್ನು ಸಹ ಬರೆದಿದ್ದಾರೆ.