ದಾವಣಗೆರೆ : ಲಿಂಗಾಯತ ಎಂಬುದು ಜಾತಿಯಲ್ಲ. ಅದೊಂದು ಧರ್ಮ, ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ. ಅದಕ್ಕಾಗಿ ನಮ್ಮ ಸಂಘರ್ಷ ನಿರಂತರ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದ್ದಾರೆ. ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಜರುಗಿದ ಶ್ರಾವಣ ಬಂತು ಅನುಭಾವ ತಂತು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಎಂಬುದು ಒಂದು ಜಾತಿಯಾಗಿ ಉಳಿಯಬಾರದು. ಬೌದ್ಧ, ಸಿಖ್, ಜೈನ ಸ್ವತಂತ್ರ ಧರ್ಮಗಳಂತೆ ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ ಆಗಬೇಕು. ಎಲ್ಲರಿಗೂ ಸಮ ಬಾಳು ಸಮ ಪಾಲು ಎಂಬ ಕಾಯಕ ಸಿದ್ದಾಂತದ ಮೇಲೆ ಬಸವಣ್ಣ ಹುಟ್ಟು ಹಾಕಿದ ಧರ್ಮ ಲಿಂಗಾಯತ ಧರ್ಮ ಎಂದು ಹೇಳಿದರು.
OBC ಮೀಸಲಾತಿ ಬೇಕಾಗಿದೆ. ಈಗ ರಾಜ್ಯದಲ್ಲಿ ಇದಕ್ಕೆ ಪೂರಕವಾದ ಸರ್ಕಾರ ಇದೆ. ಇದೇ ಕಾರಣಕ್ಕೆ ಎಸ್ಸಿ ಎಸ್ಟಿ ಸೇರಿದಂತೆ ಹಲವಾರು ಮೀಸಲಾತಿಗಳು ಇವೆ. ಅದೇ ರೀತಿಯಲ್ಲಿ ಎಲ್ಲ ಲಿಂಗಾಯತ ಒಳ ಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಆಗಬೇಕು. ಈಗಾಗಲೇ ಲಿಂಗಾಯತರಲ್ಲಿನ ಕೆಲ ಒಳ ಜಾತಿಗಳು ಲಿಂಗಾಯತರ ಪಟ್ಟಿಯಲ್ಲಿ ಇವೆ. ಈಗ ಎಲ್ಲ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರದ OBC ಪಟ್ಟಿಗೆ ಸೇರ್ಪಡೆ ಮಾಡಬೇಕು. ಇದು ನಮ್ಮ ಆಗ್ರಹವಾಗಿದೆ ಎಂದು ಗುರುಬಸವ ಸ್ವಾಮೀಜಿ ತಿಳಿಸಿದರು.
ಇಲ್ಲಿ ಹಿಂದೂ ಧರ್ಮ ಅಥವಾ ಸನಾತನ ಧರ್ಮದ ಪ್ರಸ್ತಾಪ ಆಗುವುದಿಲ್ಲ: ಇದು ಜಾಗತಿಕ ಲಿಂಗಾಯತ ಧರ್ಮದ ಸಮಾರಂಭವಾಗಿದ್ದು, ಇಲ್ಲಿ ಹಿಂದೂ ಧರ್ಮ ಅಥವಾ ಸನಾತನ ಧರ್ಮದ ಪ್ರಸ್ತಾಪ ಆಗುವುದಿಲ್ಲ. ನಾವು ಬಸವಣ್ಣನವರ ವಿಚಾರಧಾರೆಗಳನ್ನು ಮಾತ್ರ ಪ್ರಸ್ತಾಪ ಮಾಡ್ತೇವೆ. ಜೊತೆಗೆ ಸರ್ಕಾರದಿಂದ ಲಿಂಗಾಯತ ಧರ್ಮವನ್ನು ಅಧಿಕೃತವಾಗಿ ಒಂದು ಧರ್ಮ ಎಂದು ಘೋಷಣೆ ಮಾಡಬೇಕು ಎಂಬುದು ನಮ್ಮ ಉದ್ದೇಶ. ಬಸವಣ್ಣನವರು ಅಂದು ಸ್ಥಾಪನೆ ಮಾಡಿದ ಧರ್ಮವನ್ನು ಲಿಂಗಾಯತ ಧರ್ಮ ಎಂದು ಕರೆದಿದ್ದಾರೆ. ಅದನ್ನೇ ತಾತ್ವಿಕವಾಗಿ ಮುಂದುವರೆಸಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.