ದಾವಣಗೆರೆ: ಸ್ವಾಮಿಜಿಗಳು ಏಕಪಕ್ಷೀಯವಾಗಿ ವರ್ತನೆ ಮಾಡದೆ ಧಾರ್ಮಿಕ, ಅಧ್ಯಾತ್ಮಿಕ ಚಿಂತನೆ ಪಸರಿಸಬೇಕು ಎಂದು ದಾವಣಗೆರೆಯಲ್ಲಿ ಕುಡಚಿ ಶಾಸಕ ಪಿ ರಾಜೀವ್ ಅಭಿಪ್ರಾಯಪಟ್ಟಿದ್ದಾರೆ.
ಸ್ವಾಮೀಜಿಗಳು ಸಮುದಾಯದ ಪರ ನಿಲ್ಲದೇ, ಅಧ್ಯಾತ್ಮ ಪಸರಿಸಲಿ: ಶಾಸಕ ರಾಜೀವ್ ಸಲಹೆ - ಶಾಸಕ ಪಿ ರಾಜೀವ್ ಹೇಳಿಕೆ
ಮಠದ ಸ್ವಾಮೀಜಿಗಳು ಸಮುದಾಯದ ಶಾಸಕರ ಪರ ವಹಿಸುವುದು ಬಿಟ್ಟು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಪಸರಿಸಬೇಕು ಎಂದು ಶಾಸಕ ಪಿ ರಾಜೀವ್ ಹೇಳಿದ್ದಾರೆ.
ಇತ್ತೀಚೆಗೆ ತಮ್ಮ ತಮ್ಮ ಸಮುದಾಯಗಳ ಶಾಸಕರ ಪರವಾಗಿ ಸ್ವಾಮೀಜಿಗಳು ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಾಮೀಜಿಗಳು ಅಧ್ಯಾತ್ಮಿಕ ಚಿಂತನೆ ಪಸರಿಸುವ ಕೆಲಸ ಮಾಡಬೇಕು, ಸಲಹೆ, ಬುದ್ದಿವಾದ ಹೇಳಬೇಕು. ಏಕಪಕ್ಷಿಯವಾಗಿ, ವ್ಯಕ್ತಿ, ಗುಂಪುಗಳ ಪರವಾಗಿ ವರ್ತಿಸುವುದು ಸಮಂಜಸವಲ್ಲ ಎಂದು ಹೇಳಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನಮ್ಮ ಸಮುದಾಯದ ಪ್ರಭು ಚೌಹಾಣ್ ಸಚಿವರಾಗಿದ್ದಾರೆ. ನನಗೆ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ ಆ ಬಗ್ಗೆ ಸಂತಸವಿದೆ ಎಂದು ರಾಜೀವ್ ಹೇಳಿದರು. ಸಚಿವ ಸ್ಥಾನ ಬೇಕು ಎಂದು ಎಲ್ಲಿಯೂ ಕಿತ್ತಾಟ, ಗುಂಪುಗಾರಿಕೆಯನ್ನು ನಮ್ಮ ಪಕ್ಷದಲ್ಲಿ ಮಾಡಿಲ್ಲ. ಮಹೇಶ್ ಕುಮಟಳ್ಳಿ ಅವರ ಜೊತೆ ಬಿಎಸ್ ವೈ ಚರ್ಚಿಸಿಯೇ ನಿರ್ಧಾರ ತೆಗೆದುಕೊಂಡಿದ್ದಾರೆ. ಸ್ಪಷ್ಟವಾಗಿ ಖಾತೆ ಹಂಚಿಕೆ ನಡೆದಿದ್ದು, ಪಾರದರ್ಶಕವಾಗಿ ಸರ್ಕಾರ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.