ದಾವಣಗೆರೆ:ಜಿಲ್ಲೆಯ ನ್ಯಾಮತಿ ಭಾಗದಲ್ಲಿ ಕೂಲಿನಾಲಿ ಮಾಡಿ ಜೀವನ ನಡೆಸುತ್ತಿರುವ ಕುಟುಂಬಗಳೇ ಹೆಚ್ಚು, ಜಮೀನುಗಳಿಗೆ ಕೂಲಿಗೆ ಹೋದರೆ ಮಾತ್ರವೇ ಅವರ ಜೀವನ ಸಾಗುವುದು. ಆದರೆ, ಅದೇ ಕೂಲಿ ಮಾಡ್ತಿದ್ದಾ ಬಡ ಮಹಿಳೆಯನ್ನು ಚಿರತೆ ಬಲಿ ಪಡೆದಿದೆ. ಚಿರತೆ ಭಯದಿಂದ ಇಡೀ ಗ್ರಾಮಸ್ಥರು ಮನೆಯಿಂದ ಹೊರಬರಲು ಹಿಂದೇಟು ಹಾಕ್ತಿದ್ದಾರೆ.
ಚಿರತೆ ದಾಳಿಗೆ ಮಹಿಳೆ ಬಲಿ:ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿಯಲ್ಲಿ ಚಿರತೆಗೆ ಬಡಜೀವವೊಂದು ಬಲಿಯಾಗಿದೆ. ಕೂಲಿ ಮಾಡುತ್ತಿದ್ದಾಗ ಚಿರತೆ ದಾಳಿ ಮಾಡಿದ ಹಿನ್ನೆಲೆ ಮಹಿಳೆ ಸಾವನ್ನಪ್ಪಿದ್ದಾರೆ. ಈ ಗ್ರಾಮದ ಜಮೀನುಗಳಲ್ಲಿ ಹೆಚ್ಚು ಮೆಕ್ಕೆಜೋಳ ಬೆಳೆಯುತ್ತಿದ್ದು, ಕಳೆದ ದಿನದಂದು ಹತ್ತಕ್ಕೂ ಹೆಚ್ಚು ಮಹಿಳೆಯರು ಮೆಕ್ಕೆಜೋಳದ ಜಮೀನೊಂದರಲ್ಲಿ ಕಳೆ ತೆಗೆಯುಲು ಹೋಗಿದ್ದರು. ಕಳೆ ತೆಗುವ ವೇಳೆ ಚಿರತೆ ದಾಳಿಗೆ ಕಮಲಬಾಯಿ ಎನ್ನುವ ಮಹಿಳೆ ಬಲಿಯಾಗಿದ್ದರು.
ಚಿರತೆ ದಾಳಿಯಿಂದ ಗ್ರಾಮದಲ್ಲಿ ಆತಂಕ: ಘಟನೆಯಿಂದ ಇಡೀ ಫಲವನಹಳ್ಳಿ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಚಿರತೆ ಭಯದಿಂದ ಮನೆಯಿಂದ ಹೊರಬರಲು ಜನ ಹಿಂದೇಟು ಹಾಕ್ತಿದ್ದಾರೆ. ಇನ್ನು ಕೆಲವರು ಜಮೀನಿಗೆ ತೆರಳಲು ಕೂಡ ಭಯಪಡುವಂತಾಗಿದೆ. ಗಾಬರಿಗೊಂಡ ಸ್ಥಳೀಯ ಕೂಲಿಕಾರರು ಮೊದಲು ಚಿರತೆ ಹಿಡಿಯುವಂತೆ ಪಟ್ಟು ಹಿಡಿದಿದ್ದಾರೆ. ಇನ್ನು ಕೆಲವರು ಕೈಯಲ್ಲಿ ದೊಣ್ಣೆ ಕುಡುಗೊಲು ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಲ ತಿಂಗಳುಗಳ ಹಿಂದೆಯೇ ಚಿರತೆ ಹಾವಳಿ ಇದೆ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಆ ನಿರ್ಲಕ್ಷ್ಯದ ಕಾರಣವೇ ಒಂದು ಜೀವ ಬಲಿಯಾಗಿದೆ ಎಂದು ಗ್ರಾಮಸ್ಥ ಭೀಮಾನಾಯಕ್ ಆಕ್ರೋಶ ವ್ಯಕ್ತಪಡಿಸಿದರು.