ದಾವಣಗೆರೆ: ನಾವು ಕಾವೇರಿ ಹೋರಾಟದ ರೂಪುರೇಷೆಗಳನ್ನು ಬದಲಾಯಿಸಬೇಕಿದೆ. ನಮ್ಮ ಹೋರಾಟ ಸಂಬಂಧಪಟ್ಟವರಿಗೆ ಪರಿಣಾಮ ಬೀರುವಂತಿರಬೇಕು. ಬೀದಿ ಹೋರಾಟಕ್ಕಿಂತ ಕಾನೂನು ಹೋರಾಟ ಮಾಡಬೇಕೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ, ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕೆಲ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಈ ಸಂಬಂಧ ನಗರದಲ್ಲಿ ಬುಧವಾರ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸುಮಾರು 25 ವರ್ಷಗಳಿಂದ ಗಮನಿಸುತ್ತಿದ್ದೇನೆ. ಕಾವೇರಿ ಹೋರಾಟದಲ್ಲಿ ಬಂದ್, ಚಳವಳಿ, ರಸ್ತೆ ತಡೆ, ಕೊನೆಗೆ ಕರ್ನಾಟಕ ಬಂದ್ ಇದೆಲ್ಲ ಸಹಜ ಪ್ರಕ್ರಿಯೆಯಂತಾಗಿದೆ. ಇಷ್ಟೆಲ್ಲ ಪ್ರತಿಭಟನೆ, ಚಳವಳಿ ನಡೆಸಿದರೂ ಒಂದು ಹನಿ ಕಾವೇರಿ ನೀರು ಬೇರೆಡೆಗೆ ಹರಿಯದಂತೆ ತಡೆಯಲು ಆಗಿದೆಯಾ?. ಆದ್ದರಿಂದ ನಾವು ನಮ್ಮ ಹೋರಾಟದ ರೂಪುರೇಷೆಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ. ನಮ್ಮ ಹೋರಾಟ ಸಂಬಂಧಪಟ್ಟವರ ಮೇಲೆ ಪರಿಣಾಮ ಬೀರಬೇಕು. ಬೀದಿ ಹೋರಾಟಕ್ಕಿಂತ ನಾವು ಕಾನೂನು ಹೋರಾಟ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಬೀದಿ ಹೋರಾಟ ಮಾಡಿದರೂ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಮಾಡಬೇಕು. ಇದರ ಬದಲು ಆಡಳಿತ ಪಕ್ಷ, ವಿಪಕ್ಷದವರಿಗೆ, ಅಧಿಕಾರಿಗಳಿಗೆ ಘೇರಾವ್ ಹಾಕಿದರೆ ಪರಿಣಾಮ ಬೀರಬಹುದು. ಬೆಂಗಳೂರಿನಲ್ಲಿ ಕಾವೇರಿ ನೀರನ್ನು ಕುಡಿಯಲು ಬಳಸುತ್ತಾರೆ. ಹಾಗಾಗಿ ಕುಡಿಯಲು ನೀರು ಕೊಡಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಭತ್ತ ಕಬ್ಬು ಬೆಳೆಯಲು ಅವರು ನೀರು ಕೇಳುವುದಿಲ್ಲ, ಕುಡಿಯಲು ನೀರು ಕೊಟ್ಟು ಭತ್ತ ಕಬ್ಬು ಹಾಗೆಯೇ ಬಿಟ್ಟಿದ್ದರೆ ಈ ಮಟ್ಟದ ಪರಿಣಾಮ ಬೀರುತ್ತಿರಲಿಲ್ಲ ಎಂದು ತೇಜಸ್ವಿ ಪಟೇಲ್ ಹೇಳಿದರು.