ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಬಳಿಕ ಖಾಲಿ ನಿವೇಶನ ಹಾಗು ಇತರೆ ಭೂಮಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡುತ್ತಿದ್ದು, ಭೂಮಿ ಕಳೆದುಕೊಂಡವರು ಅಥವಾ ವಂಚನೆಗೊಳಪಟ್ಟವರ ಪೈಕಿ ಹೆಚ್ಚಿನವರು ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಬೇಕೋ ಅಥವಾ ನ್ಯಾಯಾಲಯದ ಮೊರೆ ಹೋಗಬೇಕಾ ಎನ್ನುವ ಗೊಂದಲದಲ್ಲಿದ್ದಾರೆ.
ಭೂಗಳ್ಳತನ, ಮೋಸದಿಂದ ಜಮೀನು ಬರೆಸಿಕೊಳ್ಳುವುದು ಇವೆಲ್ಲವೂ ಐಪಿಸಿ ಸೆಕ್ಷನ್ ವ್ಯಾಪ್ತಿಗೆ ಬರುವುದಿಲ್ಲ. ಭೂ ಸಂಬಂಧಿತ ವ್ಯಾಜ್ಯಗಳು ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ಇಂತಹ ವ್ಯಾಜ್ಯಗಳಿದ್ದರೆ ನೇರವಾಗಿ ವಕೀಲರ ಮೂಲಕ ಭೂಮಿ ಲಪಟಾಯಿಸಿದ ವ್ಯಕ್ತಿ ವಿರುದ್ಧ ದಾವೆ ಹೂಡಬಹುದಾಗಿದೆ. ನ್ಯಾಯಾಲಯ ವಾದಿ-ಪ್ರತಿವಾದಿಗಳ ವಾದ ಆಲಿಸಿ ಸಮಸ್ಯೆಗೆ ಪರಿಹಾರ ಒದಗಿಸುವ ತೀರ್ಪು ನೀಡುತ್ತದೆ.
ದಾವಣಗೆರೆಯಲ್ಲಿ ಭೂ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೆಚ್ಚಿನವರು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಆದ್ರೆ ಜಿಲ್ಲೆಯ ಕೆಲವು ಕಡೆ ಮಾತ್ರ ಆಯಾಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪೊಲೀಸರು ಮಧ್ಯ ಪ್ರವೇಶಿಸುತ್ತಿದ್ದಾರಂತೆ. ಸಿವಿಲ್ ಪ್ರಕರಣಗಳು ಪೊಲೀಸರಿಗೆ ಸಂಬಂಧಿಸದಿರುವುದು ಎಂದು ಜನರಿಗೆ ತಿಳಿಯದಿರುವುದರಿಂದ ಕೆಲವರು ಮಾತ್ರ ಪೊಲೀಸ್ ಠಾಣೆಗೆ ತೆರಳಿ ರಾಜಿ ಪಂಚಾಯಿತಿ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ.
ಶ್ರೀಮಂತರು ಸಿವಿಲ್ ಪ್ರಕರಣಗಳನ್ನು ಪೊಲೀಸರಿಂದಲೇ ಬಗೆಹರಿಸಿಕೊಳ್ಳುತ್ತಾರಂತೆ:
ಶ್ರೀಮಂತರು, ಅಧಿಕಾರಿಶಾಹಿಗಳು, ರಾಜಕಾರಣಿಗಳು ಸಿವಿಲ್ ವ್ಯಾಜ್ಯಗಳನ್ನು ಪೊಲೀಸ್ ಠಾಣೆ ಮೂಲಕವೇ ಬಗೆಹರಿಸಿಕೊಳ್ಳುತ್ತಿದ್ದಾರಂತೆ. ಇನ್ಫ್ಯೂಯೆನ್ಸ್ ಮೂಲಕ ಠಾಣೆಗಳಿಗೆ ಕರೆ ಮಾಡಿ ಬಗೆಹರಿಸುಕೊಳ್ಳುತ್ತಿದ್ದಾರೆನ್ನುವ ಮಾತು ಕೇಳಿಬಂದಿದೆ.