ದಾವಣಗೆರೆ: ಕೊರಾನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೋವಿಡ್ಯೇತರ ರೋಗಿಗಳಿಗೆ ಜಿಲ್ಲಾಸ್ಪತ್ರೆ ಸೇರಿದಂತೆ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಸ್ಪಂದನೆಯೂ ಇಲ್ಲದಂತಾಗಿದೆ. ಗಂಭೀರ ಸ್ಥಿತಿಯಲ್ಲಿದ್ದಾಗ ಬಂದರೂ ಚಿಕಿತ್ಸೆ ಸಿಗದ ಕಾರಣ ಸಾವನ್ನಪ್ಪುತ್ತಿದ್ದಾರೆ ಎಂಬ ದೂರುಗಳು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿವೆ.
ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸದಸ್ಯರು ವಿಷಯ ಪ್ರಸ್ತಾಪಿಸಿದರು. ಕೋವಿಡ್ ಹೊರತುಪಡಿಸಿ ಉಳಿದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂಬ ಒಕ್ಕೋರಲಿನ ಒತ್ತಾಯ ಮಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಬಸವಂತಪ್ಪ ಮಾತನಾಡಿ, ಅನೇಕರಿಗೆ ಉಸಿರಾಟದ ತೊಂದರೆ ಸೇರಿದಂತೆ ಅನೇಕ ಬೇರೆ ಬೇರೆ ಆರೋಗ್ಯದ ಸಮಸ್ಯೆಗಳಿಗೆ ವೆಂಟಿಲೇಟರ್ ಅವಶ್ಯಕತೆ ಇದೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ಗಳ ಸಂಖ್ಯೆ ಕಡಿಮೆ ಇದೆ ಎಂದರು.
ಬೇರೆ ರೋಗಿಗಳಿಗೆ ಬೆಡ್ ಇಲ್ಲ ಎನ್ನುತ್ತಿದ್ದಾರೆ. ಹಲವು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವೆಂಟಿಲೇಟರ್ ಅವಶ್ಯಕತೆ ಇದೆ ಎಂದು ದುಬಾರಿ ಬಿಲ್ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ರೋಗಿಗಳ ಗೋಳಂತೂ ಹೇಳತೀರದ್ದಾಗಿದೆ ಎಂದು ಸಭೆಯಲ್ಲಿ ಗಮನ ಸೆಳೆದರು.
ಕೋವಿಡ್‍ನಿಂದ ಮೃತಪಟ್ಟವರನ್ನು ಶವಗಾರದಿಂದ ಹೊರಗೆ ತರುವುದೇ ಕಷ್ಟವಾಗಿದೆ. ಮೃತರ ಸಂಬಂಧಿಕರಿಗೆ ಮುಖ ನೋಡಲು ಸಹ ಬಿಡುವುದಿಲ್ಲ. ಮೃತದೇಹ ಪಡೆಯಲು ಅಲ್ಲಿನ ಸಿಬ್ಬಂದಿ 20 ಸಾವಿರ ರೂಪಾಯಿ ಕೇಳುತ್ತಿದ್ದಾರೆ. ಈ ಬಗ್ಗೆ ಡಿಹೆಚ್ಓ ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಅವರವರ ರುದ್ರಭೂಮಿಗಳಲ್ಲಿ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪ್ರಭಾರ ಡಿಹೆಚ್‍ಓ ಡಾ. ರೇಣುಕಾರಾಧ್ಯ ಮಾತನಾಡಿ, ಕೋವಿಡ್ ರೋಗಿಗಳಿಗೆ ವೆಂಟಿಲೇಟರ್ಗಿಂತಲೂ ಮುಖ್ಯವಾಗಿ ಬೇಕಿರುವುದು ಹೈಫ್ಲೋ ಆಕ್ಸಿಜನ್. ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಈ ವ್ಯವಸ್ಥೆ ಇರಲಿಲ್ಲ. ಕೋವಿಡ್ ಬಂದ ನಂತರ ಸಿಜಿ ಆಸ್ಪತ್ರೆಯಲ್ಲಿ 15, ಬಾಪೂಜಿಯಲ್ಲಿ 8 ಮತ್ತು ಎಸ್‍ಎಸ್ ಆಸ್ಪತ್ರೆಯಲ್ಲಿ 12 ಹೈಫ್ಲೋ ಆಕ್ಸಿಜನ್ ವ್ಯವಸ್ಥೆ ಇದೆ. ಪ್ರಸ್ತುತ 80 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಇದೆ. ತಾಲೂಕುಗಳಲ್ಲಿ ಕೂಡ 50 ಬೆಡ್‍ಗಳಿಗೆ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ವೆಂಟಿಲೇಟರ್ ನಿರ್ವಹಿಸುವ ತಂತ್ರಜ್ಞರಿಲ್ಲ ಎಂದು ಮಾಹಿತಿ ನೀಡಿದರು.