ಹರಿಹರ: 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕನಿಷ್ಠ 12 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಶಿವಮೊಗ್ಗದಿಂದ ಹೊಸಪೇಟೆ ಚುನಾವಣೆ ಪ್ರಚಾರಕ್ಕೆ ಹೊಗುವ ಮಾರ್ಗ ಮಧ್ಯೆ ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ಬಿಜೆಪಿಯ ಪರ ವಾತವರಣವಿರುವುದರಿಂದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎಂದರು.
ಕಾಂಗ್ರೆಸ್ ಪಕ್ಷವು ಒಡೆದ ಮನೆಯಂತಾಗಿದ್ದು, ಸಿದ್ದರಾಮಯ್ಯ ಒಂಟಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ನಲ್ಲಿ ಮತ್ತೆ ಮೂಲ-ವಲಸಿಗ ಎಂಬ ಕೂಗು ಪ್ರಾರಂಭವಾಗಿದೆ. ಹಿರಿಯ ನಾಯಕ ಮುನಿಯಪ್ಪ ಸೇರಿದಂತೆ ಒಟ್ಟು 12 ಜನ ರಾಜ್ಯದಲ್ಲಿ ಪಕ್ಷದ ದುಸ್ಥಿತಿಯ ಬಗ್ಗೆ ಪತ್ರದ ಮೂಲಕ ರಾಷ್ಟ್ರೀಯ ನಾಯಕರಿಗೆ ತಿಳಿಸುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್ನಲ್ಲಿ ಯಾವುದೂ ಸರಿಯಿಲ್ಲ ಎಂಬುದು ಗೊತ್ತಾಗುತ್ತದೆ. ಕೊನೆಗೆಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಂದು ಚುನಾವಣೆ ಎದುರಿಸುವಂತಹ ಶೋಚನೀಯ ಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿದೆ. ಇದರ ಸಂಪೂರ್ಣ ಲಾಭವನ್ನು ಬಿಜೆಪಿ ಪಡೆದುಕೊಳ್ಳಲಿದೆ ಎಂದರು.
15ರಲ್ಲಿ ಕನಿಷ್ಠ 12 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ.ಧರ್ಮ ವಿಭಜನೆ ಎಂಬ ಪಾಪದ ಕೆಲಸಕ್ಕೆ ಕೈಹಾಕಿದ ಕಾಂಗ್ರೆಸ್ ಸ್ಥಿತಿಯನ್ನು ಗಮನಿಸಿದ್ದೀರಿ. ನಾವು ಯಾವತ್ತು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಚುನಾವಣೆ ಮಾಡಿಲ್ಲ. ಬದಲಾಗಿ ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ಮಾಡಿದ ಪರಿಣಾಮ ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿರುವುದೇ ಸಾಕ್ಷಿ ಎಂದರು.
ಧರ್ಮವನ್ನು ಒಡೆದರವರು ಸಿದ್ದರಾಮಯ್ಯ. ವೀರಶೈವ ಧರ್ಮ ಒಡೆದ ಪರಿಣಾಮ 120 ಕ್ಷೇತ್ರದಲ್ಲಿ ಗೆದ್ದ ಪಕ್ಷ ಕಳೆದ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿ ಅಧೋಗತಿಗೆ ಬಂದು ತಲುಪಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವು ಧರ್ಮಗಳ ನಡುವೆ ಬೆಂಕಿ ಹಚ್ಚಿ ಅದರ ಲಾಭ ಪಡೆಯುವ ನೀಚ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಆರೊಪಿಸಿದರು.