ಹರಿಹರ :ಕೊರೊನಾ ಶಬ್ದ ಕೇಳಿದರೆ ಜನ ಸಾಮಾನ್ಯರ ಎದೆ ಝಲ್ ಎನ್ನುತ್ತದೆ. ಸಾಮಾನ್ಯ ಜನರನ್ನು ಬಿಟ್ಟು ಬಿಡಿ.. ಹಲವು ವೈದ್ಯರು ಸಹ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಕೆಲವು ವೈದ್ಯರು ರಾಜೀನಾಮೆ ನೀಡಿದ್ದಾರೆ.
ಇಂತಹ ಸೂಕ್ಷ್ಮ ಸಮಯದಲ್ಲೂ ಜೀವದ ಹಂಗು ತೊರೆದು ಸೇವೆ ಸಲ್ಲಿಸುವ ವೈದ್ಯರು ಹಲವರಿದ್ದಾರೆ. ಇಂಥವರ ಪೈಕಿ ಹರಿಹರದ ಗುತ್ತೂರಿನ ಕೋವಿಡ್ ಕೇರ್ ಸೆಂಟರ್‌ನ ಮುಖ್ಯಸ್ಥ ಡಾ. ವಿಶ್ವನಾಥ ಕುಂದಗೋಳ್‌ಮಠ ಒಬ್ಬರು. ಜುಲೈ 13ರಿಂದ ಈ ಕೇಂದ್ರ ಆರಂಭವಾಗಿದ್ದು ಆಗಿನಿಂದಲಲೇ ಇವರು ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕೇಂದ್ರದಲ್ಲಿ 130 ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ.
ಮನೋಬಲವೇ ಮಹಾಬಲ:
ಡಾ. ವಿಶ್ವನಾಥ್‌ರವರು ಕೇಂದ್ರಕ್ಕೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಮೊದಲು ಕೆಲವು ನಿಮಿಷಗಳವರೆಗೆ ಕೌನ್ಸಿಲಿಂಗ್ ಮಾಡುತ್ತಾರೆ. ಕೊರೊನಾ ಕಾಯಿಲೆ ಎಂದರೆ ಏನು, ಅದನ್ನು ಹೇಗೆ ನಿವಾರಿಸಿಕೊಳ್ಳಬೇಕು, ಕೈಗೊಳ್ಳಬೇಕಾದ ಎಚ್ಚರಿಕೆಗಳೇನು ಎಂಬುದನ್ನು ವಿವರಿಸಿ ರೋಗಿಗಳಿಗೆ ಮನೋಬಲವನ್ನು ತುಂಬುತ್ತಾರೆ.