ದಾವಣಗೆರೆ : ಹುಲಿ, ಸಿಂಹ, ಚಿರತೆ, ಕರಡಿ, ಆನೆ ದಾಳಿ ಹೀಗೆ ಈ ಕಾಡು ಪ್ರಾಣಿಗಳಿಂದ ವ್ಯಕ್ತಿಗಳು ಸಾವನ್ನಪ್ಪಿರೋದು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ದುರಂತ ಅಂದರೆ ಕಿಲ್ಲರ್ ಕೋತಿ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ. ಇದು ರಾಜ್ಯದಲ್ಲೇ ಬಹು ಅಪರೂಪದ ಘಟನೆಯಾಗಿದೆ.
ಬಹಿರ್ದೆಸೆಗೆ ಹೊರಹೋಗಿದ್ದ ವ್ಯಕ್ತಿಯನ್ನ ಕಿಲ್ಲರ್ ಕೋತಿ ಕಚ್ಚಿ ಸಾಯಿಸಿರುವ ದಾರುಣ ಘಟನೆ ನಡೆದಿದೆ. ಕೋತಿಯ ಕೀಟಲೆಗೆ ಇಡೀ ಗ್ರಾಮದ ಜನರು ರೋಸಿ ಹೋಗಿದ್ದರು. ಅರಣ್ಯ ಇಲಾಖೆಯ ಮುಂಜಾಗ್ರತಾ ಕ್ರಮದಿಂದ ಕೊನೆಗೆ ಕಿಲ್ಲರ್ ಕೋತಿ ಎರಡು ದಿನಗಳ ಬಳಿಕ ಸೆರೆ ಸಿಕ್ಕಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ಅರಕೆರೆ ಗ್ರಾಮದಲ್ಲಿ ಅದರಲ್ಲೂ ಎ ಕೆ ಕಾಲೋನಿಯಲ್ಲಿ ಮಂಗನ ಉಪಟಳ ಹೆಚ್ಚಾಗಿತ್ತು. ಗ್ರಾಮಸ್ಥರು ಕೂಡ ಕಿಲ್ಲರ್ ಕೋತಿಯ ಕೀಟಲೆಯಿಂದ ತತ್ತರಿಸಿ ಹೋಗಿದ್ದರು. ದುರಂತ ಎಂದರೆ 66 ವರ್ಷದ ಗುತ್ಯಪ್ಪ ಬಿನ್ ರಂಗಪ್ಪ ಎಂಬುವರ ಮೇಲೆ ಮಂಗವೊಂದು ದಾಳಿ ಮಾಡಿ ಅವರ ಸಾವಿಗೆ ಕಾರಣವಾಗಿದೆ. ಮಧ್ಯರಾತ್ರಿ ಬಹಿರ್ದೆಸೆಗೆ ಹೋದಾಗ ಗುತ್ಯಪ್ಪನ ಮೇಲೆ ಅಟ್ಯಾಕ್ ಮಾಡಿದ ಮಂಗ ಕೈ ರಟ್ಟೆ ಭಾಗದಲ್ಲಿ ಕಚ್ಚಿಗಾಯಗೊಳಿಸಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಗಾಯಾಳು ಗುತ್ಯಪ್ಪನನ್ನು ಕುಟುಂಬಸ್ಥರು ಹೊನ್ನಾಳಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುತ್ಯಪ್ಪ ಸಾವನ್ನಪ್ಪಿದ್ದಾರೆ. ಅಂದೇ ರಾತ್ರಿ ಪ್ರಭಾಕರ್ ಎಂಬುವರ ಮೇಲೂ ಸಹ ಕೋತಿ ದಾಳಿ ಮಾಡಿದ್ದು, ಅದೃಷ್ಟವಶಾತ್ ಏನೂ ಅನಾಹುತ ಸಂಭವಿಸಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಡಿಎಫ್ಓ ಶಶಿಧರ್ ಹೇಳಿದ್ದೇನು : ''ಇದು ಅಪರೂಪದ ಪ್ರಕರಣವಾಗಿದೆ. ಗುತ್ಯಪ್ಪನವರ ಮೇಲೆ ಮಧ್ಯರಾತ್ರಿ ಮಂಗ ದಾಳಿ ನಡೆಸಿದೆ. ಈ ವೇಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೆ ಚಿಕಿತ್ಸೆ ಫಲಕಾರಿ ಆಗದೇ ಗುತ್ಯಪ್ಪ ಸಾವನ್ನಪ್ಪಿದ್ದಾರೆ. ಮತ್ತೋರ್ವನ ಮೇಲೆ ಕೋತಿ ದಾಳಿ ನಡೆಸಿದ್ದು, ಯಾವುದೇ ದುರ್ಘಟನೆ ನಡೆದಿಲ್ಲ. ಮೂವತ್ತಕ್ಕೂ ಹೆಚ್ಚು ಸಿಬ್ಬಂದಿ ಗ್ರಾಮದಲ್ಲಿ ಮೊಕ್ಕಾಂ ಹೂಡಿ ಕೋತಿ ಸೆರೆ ಹಿಡಿದಿದ್ದೇವೆ. ಅದನ್ನು ಅರಣ್ಯ ಇಲಾಖೆಗೆ ರವಾನೆ ಮಾಡಿ ಪಶು ವೈದ್ಯರಿಂದ ಪರೀಕ್ಷೆ ನಡೆಸಲಾಗುವುದು. ಬಳಿಕ ಕಾಡಿಗೆ ಬಿಡಲಾಗುವುದು. ಸರ್ಕಾರದಿಂದ ಬರುವ ಸವಲತ್ತನ್ನು ಅಂದ್ರೆ 15 ಲಕ್ಷ ಪರಿಹಾರ, ಪ್ರತಿ ತಿಂಗಳು ನಾಲ್ಕು ಸಾವಿರ ಮಾಸಾಶನ ಐದು ವರ್ಷದ ತನಕ ಗುತ್ಯಪ್ಪನವರ ಕುಟುಂಬಕ್ಕೆ ಕೊಡಲಾಗುವುದು'' ಎಂದರು.
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಕೋತಿ ಕಚ್ಚಿ ಸಾವನ್ನಪ್ಪಿದ ಪ್ರಕರಣ ದಾಖಲಾಗಿದೆ. ಹೊನ್ನಾಳಿ ವಲಯ ಅರಣ್ಯಾಧಿಕಾರಿಗಳು ಸ್ಥಳ ಮಹಜರ್ ನಡೆಸಿ ಕೋತಿ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಮಂಗನ ದಾಳಿಯಿಂದ ಭಯಭೀತಗೊಂಡ ಗ್ರಾಮಸ್ಥರು ಕೋತಿ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು. ಮಂಗನ ಸೆರೆ ಹಿಡಿಯಲು ಬೋನು ಬಲೆ ಹಿಡಿದು ಕೂತ ಅರಣ್ಯ ಇಲಾಖೆ ಅಧಿಕಾರಿಗಳು ಸತತ ಎರಡು ದಿನಗಳ ಕಾರ್ಯಾಚರಣೆ ನಂತರ ಬೇವಿನ ಮರ ಏರಿ ಕುಳಿತ ಕಿಲ್ಲರ್ ಕೋತಿ ಸೆರೆಯಾಗಿದೆ.