ದಾವಣಗೆರೆ : ಬಾಲಕಿ ಅಪಹರಿಸಿ ಮನೆಯಲ್ಲಿ ಕಿರುಕುಳ ನೀಡಿದ ಆರೋಪಿಗೆ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಫ್ ಟಿಎಸ್-1 (ಫೋಕ್ಸೊ ನ್ಯಾಯಾಲಯ) 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 12 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಜಿಲ್ಲೆಯ ನ್ಯಾಮತಿಯ ತಾಲೂಕಿನ ನಿವಾಸಿ ರಂಗ ಶಿಕ್ಷೆಗೆ ಗುರಿಯಾದ ಅಪರಾಧಿ.
ಅಪರಾಧಿ ರಂಗ, 2018ರ ಜನವರಿ 22ರಂದು ಶಾಲೆಯ ಬಳಿ ತೆರಳಿ ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿದ್ದನು. ಬಳಿಕ ಬಾಲಕಿಯನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿದ್ದ ಆರೋಪಿ, ಅಲ್ಲಿ ನಾಲ್ಕು ದಿನಗಳ ಕಾಲ ಸಂಬಂಧಿಕರ ಮನೆಯಲ್ಲಿರಿಸಿ ಕಿರುಕುಳ ನೀಡಿದ್ದನು. ಬಳಿಕ ಚಿತ್ರದುರ್ಗದಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಜಂಬರಘಟ್ಟ ಗ್ರಾಮದಲ್ಲಿ ಬಾಲಕಿಯನ್ನು ಬಿಟ್ಟು ಹೋಗಿದ್ದನು. ಈ ಕುರಿತು ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಠಾಣೆಯ ಪಿಎಸ್ಐ ಹನುಮಂತಪ್ಪ ಎಂ. ಶಿರಳ್ಳಿ ಅವರು ಆರೋಪಿ ವಿರುದ್ಧ ಫೋಕ್ಸೊ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಗುರುವಾರ ಈ ಪ್ರಕರಣದ ವಿಚಾರಣೆ ನಡೆಸಿದ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶ್ರೀಪಾದ ಎನ್ ಅವರು ಆರೋಪಿಗೆ ಶಿಕ್ಷೆ ಪ್ರಕಟಿಸಿದರು. ಸಂತ್ರಸ್ತೆಗೆ ಸರ್ಕಾರದಿಂದ ಒಂದು ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದರು. ಸರ್ಕಾರದ ಪರವಾಗಿ ಅಭಿಯೋಜಕಿ ಸುನಂದಾ ಈಶ್ವರಪ್ಪ ಮಡಿವಾಳರ ವಾದ ಮಂಡಿಸಿದರು.
ಎಂಡೋಸಲ್ಫಾನ್ ಬಾಧಿತ ಯುವತಿ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗೆ 10 ವರ್ಷ ಶಿಕ್ಷೆ :ಎಂಡೋಸಲ್ಫಾನ್ ಬಾಧಿತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಸಂಬಂಧ ಅಪರಾಧಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಸಜೆ ವಿಧಿಸಿ ಇತ್ತೀಚೆಗೆ ತೀರ್ಪು ನೀಡಿತ್ತು. ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ರಾಜೇಶ್ ರೈ (33) ಶಿಕ್ಷೆಗೆ ಗುರಿಯಾದ ವ್ಯಕ್ತಿ.
2015ರ ಅಕ್ಟೋಬರ್ 1ರಂದು ಯುವತಿಯ ತಂದೆ, ತಾಯಿ ಮತ್ತು ಸಹೋದರಿಯರು ತೋಟದ ಕೆಲಸಕ್ಕೆ ತೆರಳಿದ್ದಾಗ ಆರೋಪಿ ಕೃತ್ಯ ಎಸಗಿದ್ದನು. ಮನೆಯಲ್ಲಿ ಎಂಡೋಸಲ್ಫಾನ್ ಭಾದಿತೆ ಒಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡ ಆರೋಪಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ಸೆ.7ರಂದು ಆರೋಪಿಯನ್ನು ದೋಷಿ ಎಂದು ಪರಿಗಣಿಸಿ, ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 376(2)(ಎಲ್) ಅಡಿಯಲ್ಲಿ ಹತ್ತು ವರ್ಷದ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ, ಕಲಂ 448 ರಡಿ ಮೂರು ತಿಂಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಲಾಗಿತ್ತು.
ಇದನ್ನೂ ಓದಿ :ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದ ಅಪರಾಧಿ ಜೈಲಿನಲ್ಲಿ ಆತ್ಮಹತ್ಯೆ