ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಕಾರ್ಯಕ್ರಮಕ್ಕೆ ನಟ ಸುದೀಪ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚ ಸುದೀಪ್ ವೇದಿಕೆಗೆ ಆಗಮಿಸಿದ ಸುದೀಪ್ರನ್ನು ವಾಲ್ಮೀಕಿ ಗುರುಪೀಠದ ನಿರಂಜನಾನಂದ ಶ್ರೀಗಳು ಸನ್ಮಾನಿಸಿದರು. ವೀರ ಮದಕರಿ ಚಿತ್ರದ ಡೈಲಾಗ್ ಮೂಲಕ ಕಾರ್ಯಕ್ರಮಕ್ಕೆ ಕಿಚ್ಚು ಹತ್ತಿಸಿದರು. ಬಳಿಕ ವಾಸುಕಿ ವೈಭವ್ ಹಾಡುಗಳನ್ನು ಹಾಡಿ ರಂಜಿಸಿದರು.
ಸುದೀಪ್ ನೋಡಲು ನೂಕುನುಗ್ಗಲು : ಲಘು ಲಾಠಿ ಪ್ರಹಾರ
ಸುದೀಪ್ ಬರುವ ವೇಳೆ ಅಭಿಮಾನಿಗಳಿಂದ ನೂಕು ನುಗ್ಗಲು ಉಂಟಾಯಿತು. ಬ್ಯಾರಿಕೇಡ್ ತಳ್ಳಿ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ವೇದಿಕೆಯಲ್ಲಿ ಮಾತನಾಡಿದ ಸುದೀಪ್, ನಾನು ಇಲ್ಲಿಗೆ ಬಂದದ್ದು ಖುಷಿಯಾಗಿದೆ. ಇಷ್ಟೊಂದು ಜನ ಸೇರಿದ್ದಾರೆ ಎಂದುಕೊಂಡಿರಲಿಲ್ಲ. ನಾನು ಸೋತಾಗ, ಗೆದ್ದಾಗಲೂ ನೀವು ಕೈಬಿಟ್ಟಿಲ್ಲ. ನಿಮ್ಮ ಅಭಿಮಾನಕ್ಕೆ ನನ್ನ ನಮನಗಳು ಎಂದು ಹೇಳಿದರು.