ಕರ್ನಾಟಕ

karnataka

ETV Bharat / state

ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ಸದ್ದು: ಗೆಲ್ಲಲು ಕಾಂಗ್ರೆಸ್​ ಪ್ರತಿತಂತ್ರ

ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಇದರ ನಡುವೆ ಬಿಜೆಪಿಯಿಂದ ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ಸದ್ದು ಜೋರಾಗಿ ಕೇಳಿ ಬರುತ್ತಿದೆ.

karnataka-assembly-elections-2023-mayakonda-constituency-details
ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ಸದ್ದು: ಗೆಲ್ಲಲು ಕಾಂಗ್ರೆಸ್​ ಪ್ರತಿತಂತ್ರ

By

Published : Mar 15, 2023, 10:49 PM IST

ದಾವಣಗೆರೆ:ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿದೊಡ್ಡ ಮತಕ್ಷೇತ್ರ ಮಾಯಕೊಂಡ. ಈ ಕ್ಷೇತ್ರದಲ್ಲಿ ಪ್ರತಿ ಬಾರಿ ಚುನಾವಣೆಯು ಪೈಪೋಟಿ ಮತ್ತು ಜಿದ್ದಾಜಿದ್ದಿಯಿಂದ ಕೂಡಿರುತ್ತದೆ. ಬರ ಪೀಡಿತದಿಂದ ಕೂಡಿರುವ ಮಾಯಕೊಂಡ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯ ಪ್ರೊ.ಲಿಂಗಣ್ಣ ಗೆಲುವು ಸಾಧಿಸಿದ್ದಾರೆ. ಆದರೆ, ಈ ಬಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಟಿಕೆಟ್ ಆಕಾಂಕ್ಷಿಗಳು ಇರುವ ಕ್ಷೇತ್ರ ಆಗಿದೆ. ಕಾಂಗ್ರೆಸ್​ ಮತ್ತು ಬಿಜೆಪಿಯಲ್ಲಿ ಟಿಕೆಟ್​ಗಾಗಿ ಬಹು ದೊಡ್ಡ ಪಟ್ಟಿಯೇ ಇದೆ. ಹೀಗಾಗಿಯೇ ಚುನಾವಣೆ ಘೋಷಣೆಗೂ ಮುನ್ನವೇ ಆಕಾಂಕ್ಷಿಗಳ ತಂತ್ರ - ಪ್ರತಿತಂತ್ರ ಶುರುವಾಗಿದೆ.

ಮಾಯಕೊಂಡ ಐತಿಹಾಸಿಕ ಹಿನ್ನೆಲೆ ಹೊಂದಿದೆ. ವೀರ ಮದಕರಿ ನಾಯಕ ಆಳಿ ಮಡಿದ ಪ್ರದೇಶ. ಈ ಮತ ಕ್ಷೇತ್ರವು ಚನ್ನಗಿರಿಯ ಕೆಲ ಭಾಗಗಳನ್ನು ಹಂಚಿಕೊಂಡಿದೆ. ದಾವಣಗೆರೆ ತಾಲೂಕಿನಲ್ಲಿರುವ ಮಾಯಕೊಂಡ ನಗರದಿಂದ ಕೇವಲ 15 ಕಿಮೀ ದೂರದಲ್ಲಿದೆ. ಮಾಜಿ ಸಚಿವರಾದ ಎಸ್​ಎ ರವೀಂದ್ರನಾಥ್, ನಾಗಮ್ಮ ಕೇಶವಮೂರ್ತಿ ಅವರಂತಹ ನಾಯಕರನ್ನು ಸತತ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಟ್ಟ ಕೇತ್ರ. ಎಸ್​ಸಿ ಮೀಸಲು ಕ್ಷೇತ್ರವಾದ ಬಳಿಕ ಕೆಲ ನಾಯಕರು ಕ್ಷೇತ್ರ ತೊರೆದು ಬೇರೆಡೆ ನೆಲೆ ಕಂಡುಕೊಂಡಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿ - ಕಾಂಗ್ರೆಸ್ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿತ್ತು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮಾಹಿತಿ

ಈ ಹಿಂದಿನ ಚುನಾವಣೆಗಳ ಫಲಿತಾಂಶ: ಮಾಯಕೊಂಡದಲ್ಲಿ ಲಿಂಗಾಯತ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಮತಗಳೇ ನಿರ್ಣಾಯಕವಾಗಿವೆ. 2008ರ ಚುನಾವಣೆಯಲ್ಲಿ ಈ ಕ್ಷೇತ್ರ ಬಿಜೆಪಿ ವಶವಾಗಿತ್ತು. ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ 52,132 ಮತಗಳನ್ನು ಪಡೆದು ಜಯ ಸಾಧಿಸಿದ್ದರು. ಕಾಂಗ್ರೆಸ್​ ಅಭ್ಯರ್ಥಿ ಡಾ. ವೈ.ರಾಮಪ್ಪ 35,471 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ನಂತರ 2013ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಕಾಂಗ್ರೆಸ್​ನ ಅಭ್ಯರ್ಥಿ ಕೆ.ಶಿವಮೂರ್ತಿ ನಾಯ್ಕ್ 32,435 ಮತಗಳನ್ನು ಪಡೆದು ಗೆದ್ದಿದ್ದರು. ಕೆಜೆಪಿಯಿಂದ ಸ್ಪರ್ಧೆ ಮಾಡಿದ್ದ ಪ್ರೊ.ಲಿಂಗಣ್ಣ 31,741 ಮತಗಳನ್ನು ಪಡೆದು ಸೋತಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಲಿಂಗಣ್ಣ ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಕೆಎಸ್ ಬಸವರಾಜ್ (ಬಸವಂತಪ್ಪ) ವಿರುದ್ಧ 6,458 ಮತಗಳಿಂದ ಗೆಲುವು ಕಂಡಿದ್ದರು.

ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ?: ಬಿಜೆಪಿಯಿಂದ ಕಳೆದ ಪ್ರಯಾಸದ ಗೆಲುವು ಪಡೆದಿದ್ದ ಲಿಂಗಣ್ಣ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ. ಕ್ಷೇತ್ರ ಮರೆತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಜನ ಬದಲಾವಣೆ ಬಯಸಿದ್ದು ಹೊಸ ಮುಖಕ್ಕೆ ಅವಕಾಶ ಕೊಡಬೇಕು. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಸರ್ವೆ ನಡೆಸಿದೆ ಎನ್ನಲಾಗಿದ್ದು, ಮಾಯಕೊಂಡದಲ್ಲಿ ಗುಜಾರಾತ್ ಮಾಡೆಲ್ ಟಿಕೆಟ್ ಹಂಚಿಕೆಗೆ ವರಿಷ್ಠರು ಒಲವು ತೋರಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಆಕಾಂಕ್ಷಿಗಳು ಮತ್ತು ಹೊಸ ಮುಖದ ದಂಡು ಹೆಚ್ಚಿದೆ. ಕಳೆದ ಎರಡು ಬಾರಿ ಬಿಜೆಪಿ ಟಿಕೆಟ್ ಬಯಸಿದ್ದ ಬಿಜೆಪಿಯ ಹಿರಿಯ ನಾಯಕ ಬಿಟಿ ಸಿದ್ದಪ್ಪ ಅವರ ಮಗ ಜಿಎಸ್ ಶ್ಯಾಮ್ ಪ್ರಬಲ ಟೆಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಎನ್ನಲಾಗುತ್ತಿದೆ.

ಬಿಜೆಪಿಯ ಟಿಕೆಟ್​ ಆಕಾಂಕ್ಷಿಗಳು: ಕ್ಷೇತ್ರದಲ್ಲಿ ಬಿಜೆಪಿಗೆ ಲಿಂಗಾಯಿತ ಮತಗಳ ಬಲ ಇದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಂಸದ ಜಿಎಂ ಸಿದ್ದೇಶ್ವರ, ಶಾಸಕ ಎಸ್.ಎ ರವೀಂದ್ರನಾಥ್ ತಮ್ಮದೇ ಆದ ಪ್ರಭಾವ ಹೊಂದಿದ್ದು, ಈ ಬಾರಿ ಕೂಡ ಜನ ಬಿಜೆಪಿಯ ಕೈ ಹಿಡಿಯುತ್ತಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಆದ್ದರಿಂದ ಬಿಜೆಪಿಯ ಟಿಕೆಟ್​ ಆಕಾಂಕ್ಷಿಗಳ ಹೆಚ್ಚಿದ್ದಾರೆ. ಹಾಲಿ ಶಾಸಕ ಎನ್.ಲಿಂಗಣ್ಣ ಅವರೊಂದಿಗೆ ಮಾಜಿ ಶಾಸಕ ಬಸವರಾಜ್ ನಾಯ್ಕ್, ಜಿಎಸ್ ಶ್ಯಾಮ್, ಆಲೂರು ಲಿಂಗರಾಜ್, ವಾಗೀಶ್ ಸ್ವಾಮಿ, ಬಸವರಾಜ್, ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಹನುಮಂತ್ ನಾಯ್ಕ್ ಸೇರಿ ಒಟ್ಟು ಎಂಟು ಜನ ಪಕ್ಷದ ಟಿಕೆಟ್​ ಮೇಲೆ ಕಣ್ಣಿಟ್ಟಿದ್ದಾರೆ.

ಗೆಲ್ಲಲು ಕಾಂಗ್ರೆಸ್​ ತಂತ್ರ: ಕಳೆದ ಮೂರು ಚುನಾವಣಾ ಫಲಿತಾಂಶಗಳಲ್ಲಿ ಬೇರೆ-ಬೇರೆ ಪಕ್ಷಕ್ಕೆ ಮತದಾರರು ಬೆಂಬಲು ಸೂಚಿಸಿದ್ದಾರೆ. 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಕಳೆದ ಬಾರಿ ಬಿಜೆಪಿ ಜಯ ದಾಖಲಿಸಿತ್ತು. ಹೀಗಾಗಿ ಕಳೆದ ಚುನಾವಣೆಯಲ್ಲಿ ಕಡಿಮೆ ಮತ ಅಂತರದಲ್ಲಿ ಸೋತಿರುವ ಕೆಎಸ್ ಬಸವರಾಜ್ (ಬಸವಂತಪ್ಪ) ಈ ಸಲ ಕ್ಷೇತ್ರದಲ್ಲಿ ಬಿರುಸಿನ ಓಡಾಟ ನಡೆಸಿದ್ದಾರೆ. ಅಲ್ಲದೇ. ಈ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯಗಳ ಮತಗಳೇ ಹೆಚ್ಚಿವೆ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಭಿಮನಿ ಬಳಗ ಕೂಡ ಅಧಿಕ ಇದೆ. ಈ ಅಹಿಂದ ಟ್ರಂಪ್​ ಕಾರ್ಡ್​ ಬಳಸಿ ಗೆಲ್ಲಲು ಕಾಂಗ್ರೆಸ್​ ತಂತ್ರ ರೂಪಿಸುತ್ತಿದೆ.

ಕಾಂಗ್ರೆಸ್​ನಲ್ಲೂ ಟಿಕೆಟ್ ಆಕಾಂಕ್ಷಿಗಳ ದಂಡು: ಮಾಯಕೊಂಡ ಮತಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಕೂಡ ದೊಡ್ಡದಿದೆ. ಕೆಎಸ್ ಬಸವರಾಜ್(ಬಸವಂತಪ್ಪ), ಹೆಚ್ ಆನಂದಪ್ಪ, ಡಿ.ಬಸವರಾಜ್​, ಕೆ.ಶಿವಮೂರ್ತಿ ನಾಯ್ಕ್, ಬಿಹೆಚ್ ವೀರಭದ್ರಪ್ಪ, ದುಗ್ಗಪ್ಪ ಹೆಚ್, ಸವಿತಾ ಬಾಯಿ ಮಲ್ಲೇಶ್ ನಾಯ್ಕ್, ವೀರೇಶ್ ನಾಯ್ಕ್, ರಾಘವೇಂದ್ರ ನಾಯ್ಕ್, ಕಾಶಿನಾಥ್ ಯಂಕನಾಯ್ಕ್, ಎಲ್ ಕೆ ನಾಯ್ಕ್, ಅನಂತ ನಾಯ್ಕ್, ಚಂದ್ರಶೇಖರ್ ಬಿಜಿ ಹೀಗೆ 13 ಮಂದಿ ಕಾಂಗ್ರೆಸ್​ ಆಕಾಂಕ್ಷಿಗಳು ಇದ್ದು, ಟಿಕೆಟ್​ಗಾಗಿ ಈಗಾಗಲೇ ಅರ್ಜಿ ಸಲ್ಲಿಸಿ ಕ್ಷೇತ್ರದಲ್ಲಿ ವರ್ಕೌಟ್ ಆರಂಭಿಸಿದ್ದಾರೆ. ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್​ ಪೈಪೋಟಿ ಸಹ ಜೋರಾಗಿದೆ.

ಇದನ್ನೂ ಓದಿ:ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್​ ಟಿಕೆಟ್​ ಮೇಲೆ ಮುಸ್ಲಿಂ ನಾಯಕರ ಕಣ್ಣು: ಬಿಜೆಪಿ ರಣತಂತ್ರವೇನು?

ABOUT THE AUTHOR

...view details