ದಾವಣಗೆರೆ:ಚುನಾವಣೆ ದಿನಾಂಕ ಘೋಷಣೆಯಾದ ಬಳಿಕರಾಜ್ಯ ವಿಧಾನಸಭೆ ಕಣ ಮತ್ತಷ್ಟು ರಂಗೇರುತ್ತಿದೆ. ದಾವಣಗೆರೆ ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಹಂಚಿದ್ದಾರೆ ಎನ್ನಲಾದ ಸೀರೆಗಳನ್ನು ಬುಧವಾರ ರಾತ್ರಿ ಜನರು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. "ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿ, ಈ ರೀತಿಯ ವಸ್ತುಗಳನ್ನು ನೀಡಬೇಡಿ" ಎಂದು ಒತ್ತಾಯಿಸಿದರು.
ಭಾಷಾ ನಗರದ ನಿವಾಸಿಗಳು ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಭಾವಚಿತ್ರಗಳಿರುವ ಸೀರೆಗಳ ಬ್ಯಾಗ್ಗಳನ್ನು ಒಂದೆಡೆ ರಾಶಿ ಹಾಕಿ ಬೆಂಕಿ ಹಚ್ಚಿದರು. ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಡಿ. ಈ ರೀತಿಯ ಆಮಿಷಗಳನ್ನು ನಾವು ಸ್ವೀಕರಿಸಲ್ಲ ಎಂದು ಪ್ರತಿಭಟಿಸಿದರು.
"ಭಾಷಾ ನಗರದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ, ರಸ್ತೆಗಳಿಲ್ಲ. ಜನರು ಇಲ್ಲಿ ವಾಸಿಸುವುದೇ ಕಷ್ಟಕರವಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದರೆ ಆಮಿಷಗಳನ್ನು ಒಡ್ಡುತ್ತಾರೆ. ಇಂತಹದ್ದನ್ನೆಲ್ಲಾ ನಾವು ಸ್ವೀಕರಿಸಲ್ಲ" ಎಂದು ಸ್ಥಳೀಯ ಮಹಿಳೆಯರು ಸೀರೆಗಳನ್ನು ರಸ್ತೆಯಲ್ಲಿ ಎಸೆದು ಆಕ್ರೋಶ ಹೊರಹಾಕಿದರು.
ಮಹಿಳೆಯೊಬ್ಬರು ಮಾತನಾಡಿ, "ಕಡಿಮೆ ಬೆಲೆಯ ಸೀರೆಗಳನ್ನು ಕೊಟ್ಟು ಜನರನ್ನು ಯಾಮಾರಿಸಲಾಗುತ್ತಿದೆ. ರಂಜಾನ್ ವೇಳೆ ದಾನ-ಧರ್ಮ ಮಾಡುತ್ತೇವೆ. ಹೀಗೆ ಆಮಿಷಗಳನ್ನು ನೀಡುವ ಬದಲು, ನಮ್ಮ ಕಷ್ಟಗಳನ್ನು ಆಲಿಸಲಿ" ಎಂದು ಹೇಳಿದರು.
ಮುಸ್ಲಿಂ ಮುಖಂಡ ಮನ್ಸೂರ್ ಅಲಿ ಮಾತನಾಡಿ, "ಸೀರೆಯ ಬ್ಯಾಗ್ಗಳನ್ನು ಮನೆಗೆ ಕಾಂಗ್ರೆಸ್ ಮುಖಂಡರು ಎಸೆದು ಹೋಗ್ತಿದ್ದಾರೆ" ಎಂದು ಆರೋಪಿಸಿದರು. ಇದೇ ವೇಳೆ, "ಕಾಲೋನಿಗೆ ಮೂಲಭೂತ ಸೌಕರ್ಯಗಳು ಬೇಕಾಗಿದೆ. ಆದ್ದರಿಂದ ಇವುಗಳನ್ನು ಮಹಿಳೆಯರು ಸುಟ್ಟು ಹಾಕುತ್ತಿದ್ದಾರೆ" ಎಂದರು.