ದಾವಣಗೆರೆ: ದಸರಾ ಪ್ರಯುಕ್ತ ದಾವಣಗೆರೆಯಾದ್ಯಂತ ಬಹುತೇಕ ಎಲ್ಲಾ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ದೇವಾಲಯಗಳಲ್ಲಿ ಹೂವು, ಕುಂಕುಮ, ಎಲೆ, ಉತ್ತುತ್ತಿ, ತರಕಾರಿ, ಹಣ್ಣು-ಹಂಪಲುಗಳಿಂದ ತರಹೇವಾರಿ ಅಲಂಕಾರ ಮಾಡುವುದು ಸಾಮಾನ್ಯ. ಆದರೆ ದಾವಣಗೆರೆ ನಗರದ ಕನ್ನಿಕಾ ಪರಮೇಶ್ವರಿ ದೇವಿಗೆ ಕರೆನ್ಸಿ ನೋಟುಗಳಿಂದ ಧನಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ.
ದೊಡ್ಡಪೇಟೆಯ ಕನ್ನಿಕಾ ಪರಮೇಶ್ವರಿ ದೇವಿಗೆ ನವರಾತ್ರಿಯ ಒಂಭತ್ತು ದಿನಗಳ ಕಾಲ ವಿವಿಧ ಅಲಂಕಾರ ಮಾಡಲಾಗಿತ್ತು. ಹತ್ತನೇ ದಿನವಾದ ಇಂದು ಲಕ್ಷಾಂತರ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳಿಂದ ದೇವಿಯನ್ನು ದೇವಸ್ಥಾನ ಕಮಿಟಿಯ ಸದಸ್ಯರು ವಿಶೇಷವಾಗಿ ಶೃಂಗರಿಸಿದ್ದಾರೆ. 3,20,000 ಸಾವಿರ ರೂ. ಮೌಲ್ಯದ ನೋಟುಗಳಿಂದ ದೇವಸ್ಥಾನದ ಗರ್ಭಗುಡಿ ಆಕರ್ಷಣೀಯಗೊಳಿಸಲಾಗಿದೆ. ಇದರಲ್ಲಿ 10, 20, 50 ಸೇರಿದಂತೆ 100, 200 ಹಾಗೂ 500 ರೂ. ಮುಖಬೆಲೆಯ ನೋಟುಗಳಿವೆ.
ಭಕ್ತರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಇಂದು ಮತ್ತು ನಾಳೆ ವಿಶೇಷ ಅಲಂಕಾರವನ್ನು ನೋಡಲು ಅವಕಾಶವಿದೆ. ಗರ್ಭಗುಡಿ ಮುಂದೆ ಬೃಹದಾಕಾರದ ಎರಡು ಹಣದ ಮಾಲೆಯನ್ನು ಹಾಕಲಾಗಿದ್ದು, ಕಣ್ಮನ ಸೆಳೆಯುತ್ತಿದೆ.