ದಾವಣಗೆರೆ: ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಹಾಗೂ ಭಾಷೆಯನ್ನು ಮತ್ತಷ್ಟು ಸಶಕ್ತಗೊಳಿಸಲು ಮುಂದಿನ ಒಂದು ವರ್ಷದ ಅವಧಿಯನ್ನು ‘ಕನ್ನಡ ಕಾಯಕ ವರ್ಷವಾಗಿ’ ಆಚರಿಸಲು ನಮ್ಮ ಸರ್ಕಾರ ಬದ್ಧವೆಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ನಂತರ ಮಾತನಾಡಿದ ಅವರು ಕನ್ನಡ ನಾಡು, ನುಡಿ, ಭಾಷೆ, ಏಳಿಗೆಗಾಗಿ ದುಡಿದ ಸಾಧಕರನ್ನು ಗೌರವಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ನಿಯಮಾನುಸಾರ ಸರಳವಾಗಿ ಕನ್ನಡ ರಾಜ್ಯೋತ್ಸವನ್ನು ಜಿಲ್ಲೆಯಲ್ಲಿ ಆಚರಿಸಲಾಯಿತು. ಆದರೆ ಮುಂದಿನ ಬಾರಿ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ ಎಂದು ಆಶಿಸಿದರು.
ಸುಮಾರು 2,500 ವರ್ಷಗಳ ಹಿಂದೆ ಜನಿಸಿದ ಕನ್ನಡವೆಂಬ ಶಿಶು ಇಂದು ಪ್ರಬುದ್ಧಳಾಗಿ ಬೆಳೆದಿದ್ದಾಳೆ. ಅನ್ಯ ಭಾಷೆಗಳ ಒಳಹರಿವಿನ ಪರಿಣಾಮ ಅನೇಕ ಸವಾಲುಗಳು ಮುಖಾಮುಖಿಯಾಗಿದ್ದು, ಅದನ್ನು ದಿಟ್ಟವಾಗಿ ನಾವೆಲ್ಲ ಎದುರಿಸಬೇಕಾಗಿದೆ. ಜೊತೆಗೆ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡ ಭಾಷೆಯನ್ನು ಸಜ್ಜುಗೊಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕನ್ನಡವನ್ನು ಉಳಿಸಿ, ಬೆಳೆಸಿ, ರಕ್ಷಿಸಿ ಎಂಬ ಘೋಷಣೆಗಳು ಅನಿವಾರ್ಯವಾಗಿರುವ ಈ ಸಂದರ್ಭದಲ್ಲಿ ಕನ್ನಡ ಸೇನಾನಿಯ ಪ್ರೇರಣೆಯೇ ಭಾಷೆಯ ಉಳಿವಿಗೆ ಹೋರಾಟದ ದೀವಿಗೆಯಾಗಲಿ. ಕನ್ನಡ ನಾನು ಕಂಡ ಅಪ್ರತಿಮ, ಕನ್ನಡ ಸೇನಾನಿಗಳನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳುವ ಅಗತ್ಯತೆ ಇದ್ದು, ಅವರ ಹೋರಾಟದ ಫಲವಾಗಿಯೇ ಇಂದು ಅಖಂಡ ಕರ್ನಾಟಕವಾಗಿ ಉಳಿದಿರುವುದು ಎಂದು ತಿಳಿಸಿದರು.