ಕೈದಾಳೆ ಮಲ್ಲಿಕಾರ್ಜುನ ಸ್ವಾಮಿ ಪವಾಡ.. ದಾವಣಗೆರೆ:ಜಿಲ್ಲೆಯ ಕೈದಾಳೆ ಗ್ರಾಮದಲ್ಲಿ ನೆಲೆಸಿರುವ ಕೈದಾಳೆ ಮಲ್ಲಿಕಾರ್ಜುನ ಸ್ವಾಮಿ ಭಕ್ತರನ್ನು ಕಾಯುತ್ತಿದ್ದಾನೆ. ಈ ಸನ್ನಿಧಿಯಲ್ಲಿ ದೀಕ್ಷೆ ಹಾಗೂ ರುದ್ರಾಕ್ಷಿ ಮಾಲೆ ಹಾಕಿ ಗಂಟೆ ಹೊಡೆದು ದೇವರ ಮೇಲೆ ಪ್ರಮಾಣ ಮಾಡಿದ್ರೆ ಸಾಕು ಕುಡಿತದ ಚಟ ಬಿಡಿಸಬಹುದಂತೆ. ಈ ಆಚರಣೆ ಶತಮಾನಗಳಿಂದ ನಡೆದುಕೊಂಡು ಬಂದಿದೆ. ವರ್ಷಕ್ಕೊಮ್ಮೆ ಇಲ್ಲಿ ಮದ್ಯ ವ್ಯಸನಿಯರಿಗೆ ದೀಕ್ಷೆ ನೀಡಲಾಗುತ್ತದೆ. ರಾಜ್ಯದ ನಾನಾ ಭಾಗಗಳ ಮದ್ಯ ವ್ಯಸನಿಗಳು ಇಲ್ಲಿ ಬಂದು ಮಾಲೆ ಧರಿಸಿ ದೀಕ್ಷೆ ಪಡೆಯುತ್ತಾರೆ. ಇಲ್ಲಿ ಒಮ್ಮೆ ದೀಕ್ಷೆ ಪಡೆದವರು ಮತ್ತೆ ಯಾವತ್ತು ಕುಡಿತದ ಚಟಕ್ಕೆ ಒಳಗಾಗುವುದಿಲ್ಲ ಎಂಬುದು ಭಕ್ತರ ನಂಬಿಕೆ.
ಪವಾಡಗಳಿಗೆ ಪ್ರಸಿದ್ಧಿ: ಕೈದಾಳೆ ಗ್ರಾಮ ಕಳೆದ ಹಲವಾರು ದಶಕಗಳಿಂದ ಪವಾಡಗಳಿಗೆ ಪ್ರಸಿದ್ಧಿ ಪಡಿದಿದೆ. ಇಲ್ಲಿ ನಡೆಯುವ ಪವಾಡಗಳು ವೈದ್ಯಕೀಯ ಲೋಕಕ್ಕೆ ಸವಾಲಾಗಿವೆ. ಕುಡಿತ ಚಟದಿಂದ ಎಷ್ಟೋ ಮನೆಗಳು ಹಾಳಾಗಿವೆ. ಮಕ್ಕಳು ಬೀದಿ ಪಾಲಾಗಿದ್ದಾರೆ. ಆದರೆ, ದಾವಣಗೆರೆಯ ಈ ಕೈದಾಳೆ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಗೆ ಕುಡಿದು ಜೀವನ ಹಾಳು ಮಾಡಿಕೊಂಡ ಜನರು ಇಲ್ಲವೇ ಅವರ ಕುಟುಂಬಸ್ಥರು ಬಂದು ದೀಕ್ಷೆ ಪಡೆದುಕೊಂಡು ಮಲ್ಲಿಕಾರ್ಜುನ ಸ್ವಾಮಿ ಮೇಲೆ ಆಣೆ ಮಾಡಿ ರುದ್ರಾಕ್ಷಿ ಮಾಲೆಯನ್ನು ಹಾಕಿದರೆ ಸಾಕು ಸಾಯುವವರೆಗೂ ಕುಡಿತದ ಚಟಕ್ಕೆ ಒಳಗಾಗುವುದಿಲ್ಲವಂತೆ.
ದಾವಣಗೆರೆ ಜಿಲ್ಲೆಯಿಂದ 15 ಕಿ.ಮೀ ದೂರದಲ್ಲಿರುವ ಈ ಸುಕ್ಷೇತ್ರದಲ್ಲಿ ಮೊದಲೆಲ್ಲ ಬಾಯಿಗೆ ಮುದ್ರೆ ಹಾಕಿಸಿಕೊಳ್ಳುತ್ತಿದ್ದರು. ಒಂದು ತ್ರಿಶೂಲವನ್ನು ಬೆಂಕಿಯಿಂದ ಕಾಯಿಸಿ ಮುದ್ರೆ ಹಾಕಿಸಿಕೊಳ್ಳುತ್ತಿದ್ದರು. ಆದರೆ, ಕಾರಣಾಂತರಗಳಿಂದ ಈ ಮುದ್ರೆ ಹಾಕುವ ಆಚರಣೆಯನ್ನು ನಿಲ್ಲಿಸಲಾಗಿದೆ. ಇದೀಗ ಮದ್ಯ ವ್ಯಸನಿಗಳಿಗೆ ದೀಕ್ಷೆ ಹಾಗೂ ರುದ್ರಾಕ್ಷಿ ಮಾಲೆ ಹಾಕಿ ಗಂಟೆ ಹೊಡೆದು ದೇವರ ಮೇಲೆ ಪ್ರಮಾಣ ಮಾಡಿದ್ರೆ ಕುಡಿತದ ಬಗ್ಗೆ ಆಲೋಚನೆ ಮಾಡುವುದಿಲ್ಲ ಎಂಬುವುದು ಭಕ್ತರ ನಂಬಿಕೆ.
ಜನರ ಸಂಕಷ್ಟಗಳಿಗೆ ಪರಿಹಾರ: ಮಲ್ಲಿಕಾರ್ಜುನ ಸ್ವಾಮಿ ಪವಾಡ ಕುರಿತು ಮಾತನಾಡಿದ ಭಕ್ತರಾದ ಉಮೇಶ್, "ಇಲ್ಲಿ ತ್ರಿಮೂರ್ತಿ ಉದ್ಭವ ಲಿಂಗ ಇದೆ. ಕಷ್ಟ ಹೊತ್ತು ಬರುವ ಭಕ್ತಾದಿಗಳಿಗೆ ಸ್ವಾಮಿ ಕೈ ಹಿಡುತ್ತಾನೆ. ಮದ್ಯ ವ್ಯಸನಿಗಳಿಗೆ ದೀಕ್ಷೆ ಪಡೆದು ರುದ್ರಾಕ್ಷಿ ಮಾಲೆಯನ್ನು ಹಾಕಿದರೆ ವ್ಯಸನದಿಂದ ದೂರ ಉಳಿಯುತ್ತಾರೆ. ಇದಲ್ಲದೇ ಆರೋಗ್ಯ, ಮನೆ ಸಮಸ್ಯೆ, ಜನರಿಗೆ ಎದುರಾಗುವ ಕಷ್ಟಗಳಿಗೆ ಯಾವುದೇ ಔಷಧ ಇಲ್ಲದೇ ಸಮಸ್ಯೆ ಬಗೆಹರಿಸಲಾಗುತ್ತದೆ" ಎಂದು ತಿಳಿಸಿದರು.
ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆ ಆದ ಐದು ದಿನಗಳ ನಂತರ ರಥೋತ್ಸವ ನಡೆಯಲಿದೆ. ರಥೋತ್ಸವದ ದಿನ ಇಲ್ಲಿ ನೂರಾರು ಜನ ಮದ್ಯ ವ್ಯಸನಿಗಳು ತಮ್ಮ ಕುಟುಂಬ ಸದಸ್ಯರ ಒತ್ತಾಯಕ್ಕಾಗಿ ಬಂದಿರುತ್ತಾರೆ. ಹೀಗೆ ಬಂದವರು ದೀಕ್ಷೆ ಕೊಡುವಾಗಿ ಓಡಿ ಹೋದ ಘಟನೆಗಳು ಅನೇಕ ಇವೆ. ಆದರೆ, ಇಲ್ಲಿ ದೀಕ್ಷೆ ಪಡೆದರು ಮರಳಿ ಕುಡಿತಕ್ಕೆ ಶರಣಾದವರು ಕಮ್ಮಿ ಎಂಬುವುದು ಭಕ್ತರ ಪ್ರಬಲ ನಂಬಿಕೆ. ಅಲ್ಲದೇ ಹೀಗೆ ದೀಕ್ಷೆ ಪಡೆದವರು ಮತ್ತೆ ಮಧ್ಯ ಸೇವಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂಬುದು ಕೂಡ ಇಲ್ಲಿನ ನಂಬಿಕೆ. ಈ ಹಿನ್ನೆಲೆ ಎಷ್ಟೋ ಮಹಿಳೆಯರು ತಮ್ಮ ಗಂಡಂದಿರಿಗೆ ಗೊತ್ತಾಗದಂತೆ ಇಲ್ಲಿಗೆ ಕರೆದುಕೊಂಡು ಬಂದು ದೀಕ್ಷೆ ಕೊಡಿಸುತ್ತಾರೆ. ಆದರಿಂದ ಎಷ್ಟೋ ಕುಟುಂಬಗಳು ಉಳಿದುಕೊಂಡಿವೆ. ಇದರಿಂದ ಮುಂದಿನ ದಿನಗಳಲ್ಲೂ ಈ ದೇವರಿಗೆ ನಡೆದುಕೊಳ್ಳುವುದಾಗಿ ಮಹಿಳೆಯರು ಹರಕೆ ಹೊತ್ತಿದ್ದಾರೆ. ಅಲ್ಲದೇ ಯಾವುದೇ ಹರಕೆ ಮಾಡಿಕೊಂಡರು ಇಷ್ಟಾರ್ಥಗಳು ಈಡೇರುತ್ತವೆ ಹಾಗೂ ಕುಟುಂಬ ಮನಃಶಾಂತಿಯಿಂದ ಇರುತ್ತದೆ ಎನ್ನುವುದು ಜನರ ನಂಬಿಕೆ.
ಹೊರ ರಾಜ್ಯದಿಂದಲೂ ಆಗಮಿಸುವ ಭಕ್ತರು:ಇಲ್ಲಿಗೆ ರಾಜ್ಯ ಸೇರಿದಂತೆ ಹೊರ ರಾಜ್ಯದಿಂದಲೂ ಭಕ್ತರು ಬಂದು ತಮ್ಮ ದುಶ್ಚಟ ಬಿಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸ್ವಾಮಿಯ ಪವಾಡ ಕುರಿತು ಮಾತನಾಡಿದ ಶೈಲ ಎಂಬುದವರು "ನಾವು ಬೆಂಗಳೂರಿನಲ್ಲಿದ್ದರೂ ಕೈದಾಳೆ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆಯುತ್ತಾ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಮಾಡಿಕೊಂಡಿದ್ದೇವೆ. ಎಲ್ಲ ಕಡೆ ಸಂಜೆ ತೆರು ಹರಿದರೆ ಕೈದಾಳೆಯಲ್ಲಿ ಮುಂಜಾನೆಯೇ ತೇರು ಹರಿಯುವುದು ವಿಶೇಷ. ಇದು ಪವರ್ ಫುಲ್ ದೇವರಾಗಿದ್ದು, ಇಷ್ಟಾರ್ಥಗಳು ನೆರವೇರುತ್ತವೆ. ವಿದ್ಯಾಭ್ಯಾಸ, ಆರೋಗ್ಯದ ಬಗ್ಗೆ ಇಲ್ಲಿ ನಮಗೆ ಒಳ್ಳೆಯದಾಗಿದೆ" ಎಂದು ಹೇಳಿದರು.
ಇದನ್ನೂ ಓದಿ:ಆಲಯಕ್ಕೆ ಬಂದರೆ ಕುಡಿತ ಬಿಡೋದು ಪಕ್ಕ : ಇದು ಕೈದಾಳೆ ಮಲ್ಲಿಕಾರ್ಜುನನ ಪವಾಡ