ದಾವಣಗೆರೆ: ಶಿಷ್ಯ ವೇತನಕ್ಕೆ ಪಟ್ಟು ಹಿಡಿದಿರುವ ಜೆಜೆಎಂ ಕಾಲೇಜಿನ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ವಿಭಿನ್ನ ಹೋರಾಟಕ್ಕಿಳಿದಿದ್ದಾರೆ. ಈ ಮುಷ್ಕರ ಈಗ ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲಿಯೂ ಸದ್ದು ಮಾಡುತ್ತಿದೆ. ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗತೊಡಗಿದೆ.
ಶಿಷ್ಯ ವೇತನಕ್ಕೆ ಆಗ್ರಹ: ಜೆಜೆಎಂ ಕಾಲೇಜು ವೈದ್ಯರು, ವಿದ್ಯಾರ್ಥಿಗಳಿಂದ ವಿಭಿನ್ನ ಹೋರಾಟ ನಗರದ ಜಯದೇವ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಸಂಜೆಯಾದ ಬಳಿಕ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ತೆರಳುತ್ತಿದ್ದಾರೆ. ಅಲ್ಲಿಯೂ ತಮ್ಮ ಹೋರಾಟ ಮುಂದುವರಿಸಿದ್ದಾರೆ. ತಮ್ಮ ಕಷ್ಟದ ನಡುವೆಯೂ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಡ ರೋಗಿಗಳು ಬೆಂಬಲಕ್ಕೆ ನಿಂತಿದ್ದಾರೆ. ಅವರ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದ್ದಾರೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಮುಂದೆ ರಾತ್ರಿ ವೇಳೆ ಮೊಂಬತ್ತಿ ಹಿಡಿದು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಿ ಮತ್ತೆ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಹಗಲಲ್ಲಿ ನಿದ್ದೆ ಬಿಟ್ಟು ಹೋರಾಟ ಮಾಡಿದರೆ, ರಾತ್ರಿ ವೇಳೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕತ್ತಲಲ್ಲಿ ನಮ್ಮ ಬದುಕಿದ್ದು, ಬಾಳಲ್ಲಿ ಬೆಳಕು ಮೂಡಬೇಕಾದರೆ ಬೇಡಿಕೆ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಡವರ ಪ್ರತಿಕ್ರಿಯೆ ಪಡೆದು ಅವರಿಂದಲೂ ವೈದ್ಯರು ಹಾಗೂ ಪಿಜಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ವಿಡಿಯೋಗಳನ್ನು ಮಾಡಿ ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೈಮೇಲೆ ಬಿಳಿ ಬಟ್ಟೆ, ಹೊಟ್ಟೆಗೆ ತಣ್ಣೀರು ಬಟ್ಟೆ ಎಂಬ ಘೋಷಣೆಗಳುಳ್ಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಜಯದೇವ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ಮಾಡುವ ಮುಷ್ಕರ ನಿರತರು ಸಂಜೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿ ಕೋವಿಡ್ ವಿರುದ್ಧದ ಹೋರಾಟ ಮುಂದುವರಿಸಿದ್ದಾರೆ. ಕಳೆದ 16 ತಿಂಗಳಿನಿಂದ ಶಿಷ್ಯ ವೇತನ ನೀಡದ ಕ್ರಮಕ್ಕೆ ಈಗ ಆಕ್ರೋಶ ವ್ಯಕ್ತವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಬೆಂಬಲ ಸಿಗತೊಡಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಇದಕ್ಕೆ ಸರ್ಕಾರವೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.