ದಾವಣಗೆರೆ :ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಆದರೆ ಜಗಳೂರು ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟರೆ ಸಾಕು. ಏಕೆಂದರೆ ನನಗೆ ನೀರೇ ಮುಖ್ಯ. ಒಂದು ವೇಳೆ ಸಚಿವ ಸ್ಥಾನವನ್ನೂ ನೀಡದೇ, ನೀರನ್ನೂ ಹರಿಸದಿದ್ದರೆ ಮುಂದೇನೂ ಮಾಡಬೇಕೆಂಬುದನ್ನು ಆಲೋಚಿಸುತ್ತೇನೆ ಎಂದು ಜಗಳೂರು ಶಾಸಕ ಎಸ್.ವಿ ರಾಮಚಂದ್ರ ಹೇಳಿದ್ದಾರೆ.
ಜಗಳೂರು ಶಾಸಕ ಎಸ್. ವಿ. ರಾಮಚಂದ್ರ ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಬಿಜೆಪಿ ಶಾಸಕರು ಈಗಾಗಲೇ ಮಂತ್ರಿ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಆದರೆ ನಾನು ಆ ರೀತಿ ಮಾಡಿಲ್ಲ. ಅಷ್ಟೇ ಅಲ್ಲದೆ, ಜಗಳೂರು ತಾಲೂಕಿನ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ನನಗೆ ಸಚಿವ ಸ್ಥಾನ ನೀಡುವಂತೆ ಪ್ರತಿಭಟನೆ ನಡೆಸುವುದು ಬೇಡ ಎಂಬ ಸೂಚನೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೈಕಮಾಂಡ್ ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಿದ್ದೇನೆ. ಪಕ್ಷದಲ್ಲಿ ಹಿರಿಯ ಶಾಸಕರಾದ ಎಸ್.ಎ ರವೀಂದ್ರನಾಥ್, ರೇಣುಕಾಚಾರ್ಯ ಇದ್ದಾರೆ. ಅವರಿಗೆ ನೀಡಿದರೆ ಸಹಕಾರ ನೀಡುತ್ತೇನೆ ಎಂದರು.
ಎಲ್ಲೆಡೆ ಪ್ರವಾಹ ಭೀತಿ ತಲೆದೋರಿದೆ. ಆದರೆ, ಜಗಳೂರು ತಾಲೂಕಿನಲ್ಲಿ ಭೀಕರ ಬರಗಾಲವಿದೆ. ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತುಂಗಭದ್ರಾ ಡ್ಯಾಂನಿಂದ ಜಗಳೂರು ತಾಲೂಕಿಗೆ ನೀರು ಹರಿಸಬೇಕೆಂಬ ಒತ್ತಾಯ ಮೊದಲಿನಿಂದಲೂ ಮಾಡುತ್ತಿದ್ದೇವೆ. ಇದಕ್ಕಾಗಿ ನಾನು ಹೋರಾಟ ನಡೆಸುತ್ತಿದ್ದೇನೆ. ಸಿಎಂ ಬಿ. ಎಸ್ ಯಡಿಯೂರಪ್ಪ ಹಾಗೂ ಪಕ್ಷದ ಹೈಕಮಾಂಡ್ಗೆ ಈ ಬಗ್ಗೆ ಬೇಡಿಕೆ ಇಟ್ಟಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೊಂದು ವರ್ಷದಲ್ಲಿ ಈ ಕೆಲಸ ಆಗಬಹುದು ಎಂಬ ವಿಶ್ವಾಸ ಇದೆ ಎಂದು ವಿವರಿಸಿದರು.