ಹರಿಹರ:ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ ಹೊಸದೇನೂ ಅಲ್ಲ. ಪ್ರತಿ ವರ್ಷವೂ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ನೀರಾವರಿ ಭಾಗದ ಕೃಷಿ ಭೂಮಿಗಳಿಗೆ ಇಂತಹ ಬೃಹತ್ ಹಾಗೂ ಮಧ್ಯಮ ಗಾತ್ರದ ಯಂತ್ರಗಳ ಪರಿಚಯ ತುಸು ಹೆಚ್ಚಾಗಿದೆ. ಸದ್ಯ ಭತ್ತ ನಾಟಿಗೆ ಯಾಂತ್ರೀಕೃತ ಭತ್ತ ನಾಟಿ ಯಂತ್ರ ಪಾದಾರ್ಪಣೆ ಮಾಡಿದೆ.
ಎಸ್ಕೆಡಿಆರ್ಡಿಪಿ (ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ) ಅಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಮೊದಲ ಬಾರಿಗೆ ಹರಿಹರ ತಾಲೂಕು ಘಟಕಕ್ಕೆ ಈ ಯಂತ್ರವನ್ನು ನೀಡಿದೆ. ಇದು ಒಂದು ದಿನಕ್ಕೆ ಅಂದಾಜು 7 ರಿಂದ 8 ಎಕರೆ ಭತ್ತ ನಾಟಿ ಮಾಡುತ್ತದೆ ಎಂದು ಸಂಸ್ಥೆಯ ಯೋಜನಾಧಿಕಾರಿ ಗಣಪತಿ ಮಾಳಂಜಿ ತಿಳಿಸಿದರು.
ಸಾಂಪ್ರದಾಯಕ ನಾಟಿಗೆ ಎಕರೆಗೆ 12 ರಿಂದ 15 ಆಳುಗಳು ಬೇಕಾಗುತ್ತದೆ. ದಿನಕ್ಕೆ ಕೇವಲ ಒಂದು ಎಕರೆ ಮಾತ್ರ ನಾಟಿ ಮಾಡಲು ಸಾಧ್ಯ. ಗಿಡದಿಂದ ಗಿಡಕ್ಕೆ ಒಂದೇ ರೀತಿಯ ಅಂತರ ಇರುವುದಿಲ್ಲ ಎನ್ನುತ್ತಾರೆ ಮಾಳಂಜಿ.
ಆದರೆ ಈ ಯಂತ್ರದ ಮೂಲಕ ಸುಲಭವಾಗಿ ಸರಿಯಾದ ಸಮಯಕ್ಕೆ ಭತ್ತವನ್ನು ನಾಟಿ ಮಾಡಬಹುದು, ಜೊತೆಗೆ ಖರ್ಚು ಕಡಿತಗೊಳಿಸಬಹುದು. ಸರಿಯಾದ ಅಂತರ ಇಲ್ಲದ ಕಾರಣ ಬೆಳೆ ಕೂಡಾ ಕುಂಠಿತವಾಗುತ್ತದೆ. ಆದರೆ, ಈ ಯಂತ್ರದಿಂದ ಸಮಯಕ್ಕೆ ಸರಿಯಾಗಿ, ಸರಿಯಾದ ಆಳ ಮತ್ತು ಅಂತರದಲ್ಲಿ ನಾಟಿ ಮಾಡಬಹುದಾಗಿದೆ. ಕೇವಲ 2-3 ಆಳುಗಳ ಸಹಾಯ ಬೇಕು. ಒಂದು ಬಾರಿಗೆ 8 ಸಾಲುಗಳಲ್ಲಿ ಭತ್ತ ನಾಟಿ ಮಾಡುವುದರಿಂದ 2 ಗಂಟೆಗಳಲ್ಲಿ 1 ಎಕರೆ ನಾಟಿ ಮಾಡಬಹುದು ಎಂದು ಮಾಹಿತಿ ನೀಡಿದರು.