ದಾವಣಗೆರೆ: ಬೆಂಗಳೂರಿನ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ ಕೃತ್ಯ. ಇದರಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಬೆಂಗಳೂರಿನ ಗಲಭೆಗೆ ಗುಪ್ತಚರ ಇಲಾಖೆ ವೈಫಲ್ಯ ಕಾರಣವಲ್ಲ: ಭೈರತಿ ಬಸವರಾಜ್ ನಗರದಲ್ಲಿ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಟ್ಸಪ್ ಸಂದೇಶದ ಮೂಲಕ ಜನರನ್ನು ಸೇರಿಸಿ ಗಲಭೆ ನಡೆಸಲಾಗಿದೆ. ಸಮಾಜ, ದೇಶ ದ್ರೋಹದ ಕೆಲಸ ಯಾರೇ ಮಾಡಿದರೂ ತಪ್ಪು. ಅಂತವರ ವಿರುದ್ಧ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೊರೊನಾ ಪೀಡಿತರು ಹಾಗೂ ಮೃತಪಡುವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ನಿಯಂತ್ರಣಕ್ಕೆ ಜಿಲ್ಲಾಡಳಿತ ಶ್ರಮಿಸುತ್ತಿದೆ. ನಾನು ಸಹ ಈ ಬಗ್ಗೆ ಮಾಹಿತಿ ಪಡೆಯುತ್ತಿರುತ್ತೇನೆ. ಜಿಲ್ಲೆಗೆ ಉಸ್ತುವಾರಿ ಸಚಿವನಾದ ಬಳಿಕ 20 ನೇ ಬಾರಿ ಇಲ್ಲಿಗೆ ಬಂದಿದ್ದೇನೆ. ರೋಗಿಗಳಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಜೆಜೆಎಂ ಮೆಡಿಕಲ್ ಕಾಲೇಜಿನ ಗೃಹ ವೈದ್ಯರು ಹಾಗೂ ವಿದ್ಯಾರ್ಥಿಗಳ ಶಿಷ್ಯವೇತನ ಬಿಕ್ಕಟ್ಟು ಬಗೆಹರಿದಿದೆ. ಬಾಕಿ ಉಳಿದ ಹಣವನ್ನು ನೀಡಲು ಸರ್ಕಾರ ಒಪ್ಪಿದೆ. ಇನ್ನುಳಿದ ಶಿಷ್ಯವೇತನವನ್ನು ಆಡಳಿತ ಮಂಡಳಿಯೇ ಭರಿಸಲಿದೆ ಎಂಬುದಾಗಿ ಲಿಖಿತವಾಗಿ ನೀಡಿದೆ. ಸದ್ಯದಲ್ಲಿಯೇ ಸರ್ಕಾರದಿಂದ ಆದೇಶ ಬರಲಿದೆ ಎಂದು ಹೇಳಿದರು.