ದಾವಣಗೆರೆ:ಆರ್ಎಸ್ಎಸ್ ನಾಯಕ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಂದ ಲಿಂಗಾಯತರಿಗೆ ಅಪಮಾನವಾಗಿದೆ. ಅಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರನ್ನೂ ಕಡೆಗಣಿಸಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮಾತ್ರ ಲಿಂಗಾಯತರನ್ನು ರಕ್ಷಣೆ ಮಾಡುತ್ತಿರುವುದು ಸುಳ್ಳು, ಯಡಿಯೂರಪ್ಪ ಅವರನ್ನು ಎರಡು ವರ್ಷ ಅಧಿಕಾರ ನೀಡಿ, ನಂತರ ಸ್ಥಾನದಿಂದ ತೆಗೆದುಹಾಕಿದರು. ಪಾಪ ಯಡಿಯೂರಪ್ಪ ಕಣ್ಣೀರು ಹಾಕಿದ್ದರು. ಲಿಂಗಾಯತರಿಗೆ ಅಗೌರವ ಮಾಡಿರೋದು ಬಿಜೆಪಿಯವರೋ ಅಥವಾ ನಾವೋ ಎಂದು ಮತದಾರರಿಗೆ ಪ್ರಶ್ನಿಸಿದರು.
ಇನ್ನು, ವೀರಶೈವ ಲಿಂಗಾಯತರನ್ನು ಕಡೆಗಣಿಸಿರುವುದು ಬಿಜೆಪಿಯೇ, ಆರ್ಎಸ್ಎಸ್ ಸಂತೋಷ್ ಅವರು ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ. ಈ ಬಾರಿಯ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ, ಅಧಿಕಾರಕ್ಕೆ ಬಂದೇ ಬರುತ್ತದೆ. ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸುತ್ತದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಭಾಷಣ ಮಾಡುತ್ತಾರೆ. ನಮ್ಮ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಬಡವರಿಗೆ 7 ಕೆಜಿ ಅಕ್ಕಿ ಕೊಡುತ್ತಿದ್ದೆವು. ಆದರೆ ಈಗ ಬಡವರಿಗೆ ಬಿಜೆಪಿ ಸರ್ಕಾರ ನಾಲ್ಕು ಕೆಜಿಯಷ್ಟು ಮಾತ್ರ ಅಕ್ಕಿ ಕೊಡುತ್ತಿದೆ. ಬಿಜೆಪಿಯವರು ಭಂಡರು. ಆಲಿಬಾಬಾ ಮತ್ತು ಅವರ ಚಾಲೀಸ್ ಚೋರರು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಾನು ಲತಾ ಮಲ್ಲಿಕಾರ್ಜುನ ಅವರಿಗೆ ಪಕ್ಷೇತರವಾಗಿ ನಿಲ್ಲುವುದಕ್ಕೆ ಹೇಳಿಲ್ಲ: ಎಂ ಪಿ ಪ್ರಕಾಶ್ ಅವರ ಪುತ್ರಿ ಎಂ ಪಿ ಲತಾ ಅವರಿಗೆ ಚುನಾವಣೆಗೆ ನಿಂತುಕೊಂಡು ಕೈಸುಟ್ಟಕೋಬೇಡ ಅಂದಿದ್ದೆ. ನಾನು ಲತಾ ಮಲ್ಲಿಕಾರ್ಜುನ ಅವರಿಗೆ ಪಕ್ಷೇತರವಾಗಿ ನಿಲ್ಲುವುದಕ್ಕೆ ಹೇಳಿಲ್ಲ, ಅದು ಶುದ್ಧ ಸುಳ್ಳು ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ನನ್ನ ಹೆಸರನ್ನು ಕ್ಷೇತ್ರದಲ್ಲಿ ಬಳಸುತ್ತಿದ್ದರೆ ಅದು ನೂರಕ್ಕೆ ನೂರು ಸುಳ್ಳು. ಎಂ ಪಿ ಲತಾ ಪಕ್ಷೇತರವಾಗಿ ನಿಂತು ಅಶಿಸ್ತಿನಿಂದ ನಡೆದುಕೊಂಡಿದ್ದಾರೆ. ನಾವು ಅವರನ್ನು ಪಾರ್ಟಿಯಿಂದ ಉಚ್ಚಾಟನೆ ಮಾಡಿದ್ದೇವೆ. ನನ್ನ ಹೆಸರನ್ನು ಬಳಸಿಕೊಂಡಿದ್ದರೆ ಅವರು ರಾಜಕೀಯದಲ್ಲಿರುವುದಕ್ಕೆ ಯೋಗ್ಯರಲ್ಲ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಹಿಂದೆ ಒಂದು, ಮುಂದೆ ಒಂದು ಮಾತನಾಡೋದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಆ ತರ ಇಲ್ಲ. ಹಾಗಾಗಿ ಹರಪನಹಳ್ಳಿಯಲ್ಲಿ ನಮ್ಮ ಅಭ್ಯರ್ಥಿ ಕೊಟ್ರೇಶ್ ಅವರನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಇದನ್ನೂ ಓದಿ:ಕಾರಿನಲ್ಲಿ ಕೂರುವ ವೇಳೆ ಸ್ಲಿಪ್ ಆದ ಸಿದ್ದರಾಮಯ್ಯ: ನೀರು ಕೊಟ್ಟು ಆರೈಕೆ ಮಾಡಿದ ಸಹಾಯಕ