ದಾವಣಗೆರೆಯ ಗ್ರಾಮಗಳಲ್ಲಿ ಹೆಚ್ಚಾದ ನೊಣಗಳ ಉಪಟಳ ದಾವಣಗೆರೆ: ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ನೊಣಗಳ ಹಾವಳಿಗೆ ಜನ ರೋಸಿ ಹೋಗಿದ್ದಾರೆ. ದಾವಣಗೆರೆಯ ಹಲವು ಗ್ರಾಮಗಳ ಸುತ್ತಲಿನ ಕೋಳಿ ಫಾರ್ಮ್ಗಳ ಪರಿಣಾಮ ಗ್ರಾಮಗಳಲ್ಲಿ ನೊಣಗಳ ಉಪಟಳ ಹೆಚ್ಚಾಗಿದೆ. ಅಡುಗೆ ಮನೆ, ದನದ ಕೊಟ್ಟಿಗೆ ಸೇರಿದಂತೆ ಮನೆಗಳಲ್ಲಿ ನೊಣಗಳ ಕಾಟ ಹೆಚ್ಚಿದೆ. ತಾಲೂಕಿನ ಹೆಬ್ಬಾಳು, ಹುಣಸೆಕಟ್ಟೆ ಹಾಗೂ ಮಂಡ್ಲೂರು ಗ್ರಾಮಗಳಲ್ಲಿ ನೊಣಗಳು ಹೆಚ್ಚಾಗಿದ್ದು, ನೊಣಗಳ ಕಾಟಕ್ಕೆ ಹೈರಾಣಾಗಿರುವ ಜನ ಕೋಳಿ ಫಾರ್ಮಗಳ ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ.
ಮನೆ, ಅಂಗಡಿ, ಹೋಟೆಲ್ ಹೀಗೆ ಎಲ್ಲೆಂದರಲ್ಲಿ ನೊಣಗಳು ಕೂರುವ ಮೂಲಕ ಜನರಲ್ಲಿ ಆತಂಕ ಸೃಷ್ಟಿ ಮಾಡಿವೆ. ಮನೆಗಳಲ್ಲಿ ಹಣ್ಣು - ಹಂಪಲು ಹೆಚ್ಚಿದರೆ ಅಲ್ಲಿ ನೊಣಗಳ ಹಿಂಡು ದಾಳಿ ಮಾಡುತ್ತಿವೆ. ಕುಡಿಯುವ ನೀರಿನಲ್ಲೂ ನೊಣಗಳು ಬೀಳುತ್ತಿವೆ. ಇದಲ್ಲದೇ ಗ್ರಾಮದಲ್ಲಿರುವ ಹೋಟೆಲ್ಗಳಲ್ಲಿ ಟೀ ಮಾಡುವ ಸ್ಥಳದಲ್ಲೂ ಕೂಡ ನೊಣಗಳ ಹಾವಳಿಯಿಂದ ಹೋಟೆಲ್ ಮಾಲೀಕರು ಹೈರಾಣಾಗಿದ್ದಾರೆ.
ನೊಣಗಳ ಕಾಟಕ್ಕೆ ಗೃಹಿಣಿಯರು ಅಡುಗೆ ಮಾಡಲು ಬೇಸತ್ತು ಹೋಗಿದ್ದಾರೆ. ಇದರಿಂದ ಗ್ರಾಮಸ್ಥರು ಪ್ರತಿ ದಿನ ತೊಂದರೆ ಅನುಭವಿಸುತ್ತಿದ್ದು, ಅದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಹೆಬ್ಬಾಳು ಗ್ರಾಮ ಪಂಚಾಯಿತಿ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ನೊಣಗಳಿಂದ ಮುಕ್ತಿ ಕೊಡಿಸಿ:ಈ ಬಗ್ಗೆ ಹೆಬ್ಬಾಳು ಗ್ರಾಪಂ ಮಾಜಿ ಅಧ್ಯಕ್ಷ ಪರಶುರಾಮ್ ಮಾತನಾಡಿ, "ಕೋಳಿ ಫಾರ್ಮ್ನಿಂದ ತುಂಬಾ ಸಮಸ್ಯೆಯಾಗುತ್ತಿದೆ. ನೊಣಗಳ ಕಾಟದಿಂದ ಊಟ ಮಾಡುವುದಕ್ಕೂ ಕಷ್ಟ ಆಗಿದೆ. ಕೋಳಿ ಫಾರ್ಮ್ಗೆ ಹೋಗಿ ಈ ರೀತಿ ನೊಣ ಹೆಚ್ಚಾಗಿವೆ, ಸಮಸ್ಯೆಯನ್ನು ಬಗೆಹರಿಸಿ ಎಂದರೆ ಅವರು ಸ್ಪಂದಿಸುತ್ತಿಲ್ಲ. ಕೋಳಿ ಫಾರ್ಮ್ನಲ್ಲಿ ಔಷಧ ಸಿಂಪಡಿಸಿದರೆ ನೊಣಗಳು ಗ್ರಾಮಕ್ಕೆ ಬರುತ್ತವೆ. ನಮಗೆ ನೊಣಗಳಿಂದ ಮುಕ್ತಿ ಕೊಡಿಸಬೇಕು, ನೊಣದ ಕಾಟದಿಂದ ಗ್ರಾಮದಲ್ಲಿ ಸಂಬಂಧ ಬೆಳೆಸಲು ಯಾರು ಬರುತ್ತಿಲ್ಲ. ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೆ ಅವರು ಬೀದಿಯಲ್ಲಿ ಔಷಧ ಸಿಂಪಡಣೆ ಮಾಡುತ್ತಾರೆ ಅಷ್ಟೇ, ಮನೆ ಒಳಗೆ ಔಷಧ ಸಿಂಪಡಣೆ ಮಾಡಲ್ಲ ಇದರಿಂದ ನಮಗೆ ಸಮಸ್ಯೆ ಆಗುತ್ತಿದೆ" ಎಂದರು.
ಇದನ್ನೂ ಓದಿ:ಗಡಿ ಜಿಲ್ಲೆಯಲ್ಲಿ ಮಕ್ಕಳಿಗೆ ಮತ್ತೆ ಬಂತು ವಿಚಿತ್ರ ಚುಕ್ಕಿ ರೋಗ.. ಪೋಷಕರಲ್ಲಿ ಆತಂಕ, ವೈದ್ಯರು ಹೇಳುವುದೇನು?
ಗ್ರಾಮಸ್ಥ ಶಂಕರಪ್ಪ ಮಾತನಾಡಿ, "ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತು ಗ್ರಾಮಗಳು ಬರುತ್ತವೆ. ಈ ಭಾಗದಲ್ಲಿರುವ ಏಳಕ್ಕೂ ಹೆಚ್ಚು ಕೋಳಿ ಫಾರ್ಮ್ಗಳಿಂದ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹತ್ತು ಗ್ರಾಮಗಳಿಂದ ಹತ್ತು ಕಿಮೀ ದೂರಕ್ಕೆ ಈ ಫಾರ್ಮ್ಗಳನ್ನು ಸ್ಥಳಾಂತರ ಮಾಡಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಈ ಕೋಳಿ ಫಾರ್ಮ್ಗಳನ್ನು ಸ್ಥಳಾಂತರ ಮಾಡಲಿಲ್ಲ ಎಂದರೆ ಫಾರ್ಮ್ಗಳಿಗೆ ಬೀಗ ಜಡಿದು, ಹೋರಾಟ ನಡೆಸುತ್ತೇವೆ" ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಚಾಮರಾಜನಗರ: ವಿಚಿತ್ರ ಚರ್ಮ ರೋಗಕ್ಕೆ ತುತ್ತಾದ ಮಕ್ಕಳನ್ನು ಭೇಟಿಯಾದ ಜಿಲ್ಲಾಧಿಕಾರಿ