ದಾವಣಗೆರೆ: ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ನಿವೇಶನ, ಕಟ್ಟಡ, ಭೂಮಿ ಮತ್ತಿತರ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದೆ. ಈ ಹೊಸ ನಿಯಮ ಈಗಾಗಲೇ ಜಾರಿಯಲ್ಲಿದೆ.
ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಜಸ್ವ ಸಂಗ್ರಹಕ್ಕೆ ಗುರಿ ನೀಡಿಲಾಗಿದ್ದು, ಸರ್ಕಾರದ ಬೊಕ್ಕಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಜನವರಿ 2019ರಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆಯಾಗಿತ್ತು. ಕಂದಾಯ ಇಲಾಖೆಯಿಂದ ಅಧಿಕ ಪ್ರಮಾಣದ ರಾಜಸ್ವ ಸಂಗ್ರಹಕ್ಕೆ ಗುರಿ ನೀಡಿದ್ದರಿಂದ ಇದೀಗ ಮತ್ತೆ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗಿದೆ.
ಹೊಸ ನಿಯಮ ಜಿಲ್ಲೆಗೂ ಅನ್ವಯವಾಗಿದೆ. ನಗರದ ಶಾಮನೂರು, ಕುಂದವಾಡ, ಯರಗುಂಟೆ, ಶಿರಮಗೊಂಡನಹಳ್ಳಿ ಇಷ್ಟು ಭಾಗದಲ್ಲಿ ಭೂಮಿಗೆ ಚಿನ್ನದಂತಹ ಬೇಡಿಕೆ ಇದ್ದು, ಈ ಹೊಸ ಮಾರ್ಗಸೂಚಿ ದರ ಹೆಚ್ಚು ಹೊರೆಯಾಗುತ್ತಿದ್ದರೂ ಕೂಡ ನೋಂದಣಿಗಳ ಪ್ರಮಾಣ ಮಾತ್ರ ಕುಗ್ಗಿಲ್ಲ. ಕಟ್ಟಡ, ಜಮೀನು, ನಿವೇಶನ, ಸೇರಿದಂತೆ ಉಳಿದ ಇನ್ನಿತರೆ ಸ್ಥಿರಾಸ್ತಿಗೆ ಶೇ. 30 ರಷ್ಟು ಮಾರ್ಗಸೂಚಿ ದರ ಹೆಚ್ಚಾಗಲಿದೆ. ಸರ್ಕಾರದ ಬೊಕ್ಕಸ ಹೆಚ್ಚಿಸಲು ದಾವಣಗೆರೆ ಉಪನೋಂದಣಿ ಅಧಿಕಾರಿಗಳಿಗೆ ಸರ್ಕಾರ ಒಂದು ವರ್ಷಕ್ಕೆ 167 ಕೋಟಿ ಗುರಿ ನೀಡಿದರೆ, ಜಿಲ್ಲೆಗೆ 245 ಕೋಟಿ ರಾಜಸ್ವ ಸಂಗ್ರಹಕ್ಕೆ ಗುರಿ ನೀಡಲಾಗಿದೆ. ಏಪ್ರಿಲ್ನಿಂದ ಮಾರ್ಚ್ಗೆ ಶೇ 167.61ರಷ್ಟು ಒಟ್ಟಾರೆ ಟಾರ್ಗೆಟ್ ನೀಡಲಾಗಿದ್ದು, ಉಪನೋಂದಣಾಧಿಕಾರಿಗಳಿಗೆ ತಲೆಬಿಸಿಯಾಗಿ ಪರಿಣಮಿಸಿದೆ ಎಂದು ಉಪನೋಂದಣಿ ಅಧಿಕಾರಿ ರಾಮಕೃಷ್ಣ ಮಾಹಿತಿ ನೀಡಿದರು.