ದಾವಣಗೆರೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆದ ಜೆಡಿಎಸ್ನೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಈ ಮೂಲಕ ಕುಮಾರಸ್ವಾಮಿ ಸಿಎಂ ಮಾಡಿ, ಕಾಂಗ್ರೆಸ್ 'ರಿಮೋಟ್ ಕಂಟ್ರೋಲ್ ಕರಪ್ಶನ್' ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಜಿ. ಎಂ. ಸಿದ್ದೇಶ್ವರ್ ಪರ ಮತಯಾಚನೆಗಾಗಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಲ್ಲದೇ ಇದು ಕಲಬೆರಕೆ ಘಟ್ ಬಂಧನ್ ಎಂದು ಟೀಕಿಸಿದರು.
ಸಿಎಂ ಕುಮಾರಸ್ವಾಮಿ ತಾವು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕೃಪೆಯಿಂದ ಮುಖ್ಯಮಂತ್ರಿಯಾಗಿರುವುದಾಗಿ ಹೇಳುತ್ತಾರೆ. ಜನರಿಂದ ಆರಿಸಿ ಬಂದ ಸಿಎಂ ಅಲ್ಲ ಅನ್ನುತ್ತಾರೆ. ಕುಮಾರಸ್ವಾಮಿಗೆ ನಾಚಿಕೆ ಆಗಬೇಕು. ಚುನಾವಣೆಯಲ್ಲಿ ಗೆಲ್ಲಿಸಿದ ಜನರಿಗೆ ಇದರಿಂದ ಅಪಮಾನವಾಗಿದೆ. ಸಿಎಂ ಹುದ್ದೆಯಲ್ಲಿದ್ದುಕೊಂಡು ಜನರ ಗೌರವ ಕಾಪಾಡಬೇಕು. ಆದರೆ ಅದನ್ನು ಬಿಟ್ಟು ಗೌರವ ತೆಗೆಯುವ ಕೆಲಸ ಮಾಡುತ್ತಿರುವ ಇಂಥ ಸಿಎಂ ನಿಮಗೆ ಬೇಕಾ ಅಮಿತ್ ಶಾ ಪ್ರಶ್ನಿಸಿದರು.
ಬಿಜೆಪಿಗೆ ಹೆಚ್ಚು ಸ್ಥಾನ ಪಡೆದಿದ್ದರೂ ಜೆಡಿಎಸ್- ಕಾಂಗ್ರೆಸ್ ಅಪವಿತ್ರ ಮೈತ್ರಿಯ ಸರ್ಕಾರ ಕರ್ನಾಟಕದಲ್ಲಿದೆ. ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. 48 ಸಾವಿರ ಕೋಟಿ ರೂಪಾಯಿಯಲ್ಲಿ ಮನ್ನಾ ಮಾಡಿರುವುದು ಕೇವಲ 15 ಸಾವಿರ ಕೋಟಿ ರೂಪಾಯಿ ಮಾತ್ರ. ಅಧಿಕಾರಕ್ಕೆ ಬಂದು ವರ್ಷವಾಗುತ್ತಾ ಬಂದಿದ್ದರೂ, ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಮಿತ್ ಶಾ ದೂರಿದರು.
2014ಕ್ಕೂ ಮೊದಲು ಹತ್ತು ವರ್ಷ ಆಡಳಿತ ನಡೆಸಿದ್ದ ಯುಪಿಎ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿತ್ತು. 13ನೇ ಹಣಕಾಸು ಆಯೋಗದ ಶಿಫಾರಸಿನಂತೆ 88,583 ಕೋಟಿ ರೂಪಾಯಿ ನೀಡಿತ್ತು. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ಐದೇ ವರ್ಷದಲ್ಲಿ ಕರ್ನಾಟಕಕ್ಕೆ ಹದಿನಾಲ್ಕನೇ ಹಣಕಾಸು ಆಯೋಗದ ಶಿಪಾರಸಿನಂತೆ ಹೆಚ್ಚು ಹಣ ನೀಡಿದ್ದಾರೆ ಎಂದರು.
ಇನ್ನು ಜಮ್ಮು ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ ದೇಶದಲ್ಲಿ ಇಬ್ಬರು ಪ್ರಧಾನಿಯಾಗಳಾಗಬೇಕು ಅಂತಾರೆ. ಯಾವುದೇ ಕಾರಣಕ್ಕೂ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಡಲು ಸಾಧ್ಯವಿಲ್ಲ. ಅದು ನಮ್ಮ ಅವಿಭಾಜ್ಯ ಅಂಗ. ಪಾಕಿಸ್ತಾನ ಸದೆಬಡಿಯಲು, ಉಗ್ರವಾದ ಕೊನೆಗಾಣಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಮತ್ತೆ ಬರಬೇಕು. ಅದಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಶಾ ಮತದಾರರಿಗೆ ಕರೆ ನೀಡಿದರು.