ಕರ್ನಾಟಕ

karnataka

ETV Bharat / state

ತುಂಗಭದ್ರೆಯ ಒಡಲು ಬಗೆಯುತ್ತಿರುವ ಮರಳು ದಂಧೆಕೋರರು.. ಜನಪ್ರತಿನಿಧಿ-ಅಧಿಕಾರಿಗಳ ಕೃಪಾಕಟಾಕ್ಷ? - ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆ

ಕಳೆದ ಎರಡು ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ನದಿಗೆ ಇಳಿಯುವ ಮರಳು ದಂಧೆಕೋರರು ಬೋಟ್, ತೆಪ್ಪಗಳ ಮೂಲಕ ಮರಳನ್ನು ತಗೆದು ಅಕ್ರಮ ಸಾಗಾಣಿಕೆ ಆರಂಭಿಸಿದ್ದಾರೆ. ಅಕ್ರಮ ಮರಳುಗಾರಿಕೆಗೆ ಮೂರು ಪಕ್ಷಗಳ ಬೆಂಬಲಿಗರು, ಅಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮರಳುಗಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

illegal-sand-dredging-in-harihara-news
ಜನಪ್ರತಿನಿಧಿ-ಅಧಿಕಾರಿಗಳ ಕೃಪಕಟಾಕ್ಷ, ಹರಿಹರದಲ್ಲಿ ಅಕ್ರಮ ಮರಳು ದಂಧೆಗೆ ಹೇಳೋರಿಲ್ಲ, ಕೇಳೋರಿಲ್ಲ..?

By

Published : Oct 8, 2020, 7:59 PM IST

ಹರಿಹರ:ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೆಂಬಲದಿಂದ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆಯನ್ನು ಕೆಲವರು ಎಗ್ಗಿಲ್ಲದಂತೆ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಜಲಮೂಲಕ್ಕೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿದೆ.

ಹರಿಹರದಲ್ಲಿ ಅಕ್ರಮ ಮರಳು ದಂಧೆ: ತುಂಗಭದ್ರೆಯ ಒಡಲು ಬಗೆಯುತ್ತಿರುವ ದಂಧೆಕೋರರು

ನಗರದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುವುದನ್ನೇ ಕಾಯುತ್ತಿದ್ದ ಅಕ್ರಮ ಮರಳು ಸಾಗಣಿಕೆದಾರರು, ರಾತ್ರಿಯಾಗುತ್ತಿದ್ದಂತೆ ನದಿಯ ಒಡಲನ್ನು ಬಗೆಯುತ್ತಿದ್ದಾರೆ. ಈ ಅಕ್ರಮಕ್ಕೆ ಬ್ರೇಕ್ ಹಾಕಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಕಳೆದ ಎರಡು ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ನದಿಗೆ ಇಳಿಯುವ ಇವರು, ಬೋಟ್, ತೆಪ್ಪಗಳ ಸಹಾಯದಿಂದ ಮರಳನ್ನು ತಗೆದು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎನ್ನಲಾಗ್ತಿದೆ. ಕೈಲಾಸ ನಗರ, ಮೆಟ್ಟಿಲುಹೊಳೆ ರಸ್ತೆ, ಹೊಸ ಭರಂಪುರ, ಎಲ್ಲಮ್ಮ ದೇವಸ್ಥಾನ ರಸ್ತೆ, ಹಳೆ ಹರ್ಲಾಪುರ, ನಾರಾಯಣ ಆಶ್ರಮದ ಹಿಂಭಾಗ, ಗುತ್ತೂರು, ಸಾರಥಿ, ಚಿಕ್ಕಬಿದರಿಯಲ್ಲಿ ಬೋಟ್‌ಗಳ ಮೂಲಕ ಅಕ್ರಮ ಮರಳು ಸಾಗಿಸುತ್ತಾರೆ.

ಅದೇ ರೀತಿ ಮಂದಾಪುರ, ಕರ್ಲಹಳ್ಳಿ ಜಮೀನುಗಳಲ್ಲಿ ಮರಳನ್ನು ಫಿಲ್ಟರ್ ಮಾಡಲಾಗುತ್ತಿದೆ. ಬ್ಯಾಲದಹಳ್ಳಿ ಹಳ್ಳದಲ್ಲಿ ತೆಪ್ಪಗಳ ಮೂಲಕ ಮರಳನ್ನು ತೆಗೆಯಲಾಗುತ್ತಿದೆ ಎಂದು ಹೇಳಲಾಗ್ತಿದೆ.

ಅಕ್ರಮ ದಂಧೆಯಲ್ಲಿ ಮೂರು ಪಕ್ಷದವರ ಪಾತ್ರ?

ಅಕ್ರಮ ಮರಳುಗಾರಿಕೆಗೆ ಮೂರು ಪಕ್ಷಗಳ ಬೆಂಬಲಿಗರು, ಅಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕೆಲವರು ಮರಳು ದಂಧೆ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲಾ ಮಟ್ಟದ ಪೊಲೀಸ್ ಉನ್ನತ ಅಧಿಕಾರಿಗಳ ಕೃಪೆಯೂ ಇದೆ ಎಂಬುದು ಸ್ಥಳೀಯರ ಆರೋಪ.

ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ:

ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸರ್ಕಾರ ಆದೇಶ ನೀಡಿದೆ. ಆದೇಶ ಪಾಲಿಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ.

ABOUT THE AUTHOR

...view details