ದಾವಣಗೆರೆ:''ವೀರಶೈವ ಲಿಂಗಾಯತ ಸಮುದಾಯದಲ್ಲಿ ಬರುವ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎನ್ನುವ ಕುರಿತು ಸ್ವಾಮೀಜಿಗಳು ಸಭೆ ಮಾಡಿರುವುದು ನನಗೆ ಗೊತ್ತಿಲ್ಲ. ವೀರಶೈವ ಲಿಂಗಾಯತ ಸಮಾಜದ ಶ್ರೀಗಳು ಯಾವುದೇ ನಿರ್ಣಯ ತೆಗೆದುಕೊಂಡರೂ ಅದಕ್ಕೆ ನನ್ನ ಬೆಂಬಲವಿದೆ'' ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರದ ಅವರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಸಭೆ ಬಗ್ಗೆ ನನಗೂ ಅಷ್ಟು ಐಡಿಯಾ ಇಲ್ಲ. ಏನು ಆಗುತ್ತೋ ನೋಡೊಣ. ಈ ಬಗ್ಗೆ ತಿಳಿದುಕೊಂಡು ಮಾತನಾಡುವೆ'' ಎಂದ ಅವರು, ''ಇಂದು ಸೋಮವಾರ ಅನ್ನಭಾಗ್ಯ ಯೋಜನೆ ಚಾಲನೆ ನೀಡಲಾಗಿದೆ. ಐದು ಗ್ಯಾರಂಟಿಗಳನ್ನು ಈಡೇರಿಸಬೇಕಿದೆ'' ಎಂದರು.
ಯಶವಂತ್ ರಾವ್ ಜಾಧವ್ಗೆ ತಿರುಗೇಟು:ಚಿತ್ರದುರ್ಗ ತಾಲೂಕಿನ ಭೀಮಸಮುದ್ರದಲ್ಲಿ ನಡೆಯುತ್ತಿರುವ ಮೈನಿಂಗ್ ಪಾಯಿಂಟ್ನಲ್ಲಿ ಲಾರಿ ಸಂಚಾರ ಸ್ಥಗಿತವಾಗಿದ್ದು, ಇದರ ಹಿಂದೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೈವಾಡವಿದೆ ಎಂದು ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ಆರೋಪ ಮಾಡಿದ್ದರು. ಅದಕ್ಕೆ ಉತ್ತರಿಸಿದ ಸಚಿವರು, ''ಭೀಮಸಮುದ್ರ ಗಣಿಗಾರಿಕೆಯಲ್ಲಿ ಯಾರು ಎಷ್ಟು ಕಮಿಷನ್ ಹೊಡೆದಿದ್ದಾರೆ? ಯಾರು ಎಷ್ಟು ತಿಂದಿದ್ದಾರೆ? ಮೈನಿಂಗ್ ಪ್ರಕರಣದ ಕುರಿತು ಒಂದೊಂದೇ ಹೊರಗೆ ಬರುತ್ತೆ ತಡೆದುಕೊಳ್ಳಿ'' ಎಂದು ಯಶವಂತ್ ರಾವ್ ಜಾಧವ್ಗೆ ತಿರುಗೇಟು ನೀಡಿದರು.