ದಾವಣಗೆರೆ: ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ಸಿಗುತ್ತೆ ಅಂತ ಕಾಯ್ತಾ ಇದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕೇಂದ್ರದಿಂದ ಹೆಚ್ಚಿನ ನೆರೆ ಪರಿಹಾರ ಸಿಗುತ್ತೆ ಅಂತಾ ಕಾಯ್ತಾ ಇದ್ದೇನೆ: ಬಿಎಸ್ವೈ - davanagere news
ರಾಜ್ಯದಲ್ಲಿ ಉಂಟಾದ ಭಾರೀ ನೆರೆಗೆ ಕೇಂದ್ರದಿಂದ ಪರಿಹಾರಕ್ಕೆ ಕಾಯುತ್ತಾ ಇದ್ದೇನೆ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ. ನೆರೆ ಉಂಟಾಗಿ ತಿಂಗಳುಗಳೇ ಕಳೆದುಹೋಗಿವೆ. ಇನ್ನೂ ಕೂಡ ಸಂಪೂರ್ಣವಾಗಿ ನೆರೆಗೆ ಒಳಗಾದ ಜನರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿಲ್ಲ.
![ಕೇಂದ್ರದಿಂದ ಹೆಚ್ಚಿನ ನೆರೆ ಪರಿಹಾರ ಸಿಗುತ್ತೆ ಅಂತಾ ಕಾಯ್ತಾ ಇದ್ದೇನೆ: ಬಿಎಸ್ವೈ](https://etvbharatimages.akamaized.net/etvbharat/prod-images/768-512-4594244-thumbnail-3x2-nin.jpg)
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಮಾಡಿ ನಂತರ ದಾವಣಗೆರೆಯಲ್ಲಿ ರಂಭಾಪುರಿ ಶ್ರೀಗಳ ದಸರಾ ಧರ್ಮ ಸಮ್ಮೇಳನ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಜಿಎಂಐಟಿ ಹೆಲಿಪ್ಯಾಡ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಅಕ್ಟೋಬರ್ 4, 5, 6ರಂದು ಅತಿವೃಷ್ಟಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದರು.
ಅಧಿವೇಶನ ಮಾಡಲು ಸಾಧ್ಯವಾಗಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ. ಈ ಕಾರಣಕ್ಕಾಗಿ ಬೆಂಗಳೂರಿನಲ್ಲಿಯೇ ಚಳಿಗಾಲದ ಅಧಿವೇಶನ ನಡೆಸಲಾಗುವುದು. ಮುಂದಿನ ಬಾರಿ ಬೆಳಗಾವಿಯಲ್ಲೇ ನಡೆಸುತ್ತೇವೆ ಎಂದ ಅವರು, ರಾಜ್ಯದಲ್ಲಿ ಕೆಲವು ಕಡೆ ಬರ ಮತ್ತು ನೆರೆ ಇದೆ. ಆದರೂ, ಈ ಬಾರಿ ಉತ್ತಮ ಮಳೆಯಿಂದ ಎಲ್ಲಾ ಜಲಾಶಯಗಳು ತುಂಬಿವೆ. ಇಂತಹ ಉತ್ತಮ ವಾತಾವರಣದಲ್ಲಿ ರಾಜ್ಯವನ್ನು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.