ದಾವಣಗೆರೆ:ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ವಿಜಯನಗರ ಶಾಸಕ ಆನಂದ್ ಸಿಂಗ್ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆ ಹರಪನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದಾಗ ನನ್ನ ಕ್ಷೇತ್ರದ ಹಲವು ಕೆಲಸಗಳು ಆಗಿರಲಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಹೀಗಾಗಿ ಸಮ್ಮಿಶ್ರ ಸರ್ಕಾರದ ನಡೆಗೆ ಬೇಸತ್ತು ರಾಜೀನಾಮೆ ನೀಡಿದ್ದೆ ಎಂದು ಪುನರುಚ್ಚರಿಸಿದರು. ನಾನು ರಾಜೀನಾಮೆ ನೀಡಿದಾಗ ಬಿಜೆಪಿ ಮುಖಂಡರು ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಬಂದೆನೇ ವಿನಃ ಸಚಿವ ಸ್ಥಾನ ನೀಡುತ್ತಾರೆ ಎಂಬ ಕಾರಣಕ್ಕೆ ನಾನು ಬಿಜೆಪಿಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದರಲ್ಲದೇ, ಇನ್ನು ಹರಪನಹಳ್ಳಿ ಪ್ರತ್ಯೇಕ ಜಿಲ್ಲೆಗೆ ಹೋರಾಟ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹೋರಾಟದ ಹಕ್ಕಿದೆ, ಆದ್ದರಿಂದ ಯಾರು ಬೇಕಾದರೂ ತಮ್ಮ ಬೇಡಿಕೆ ಮುಂದಿಡಬಹುದು ಎಂದರು.
ಇದೇ ವೇಳೆ ಪೌರತ್ವ ಕಾಯ್ದೆ ವಿಚಾರ ಪ್ರಶ್ನೆ ಮಾಡುತ್ತಿದ್ದಂತೆ, ನಾನು ಆ ಬಗ್ಗೆ ಮಾತನಾಡಲ್ಲ. ಅದು ರಾಷ್ಟ್ರೀಯ ವಿಚಾರ ಎಂದು ಹೇಳಿ ಹೊರಟರು.