ದಾವಣಗೆರೆ: ಕುಡಿದ ಅಮಲಿನಲ್ಲಿ ಪತಿಯೋರ್ವ ತನ್ನ ಪತ್ನಿಯನ್ನು ಹತ್ಯೆ ಮಾಡಿ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುಲೋಚನಾ(45) ಕೊಲೆಯಾದ ಮಹಿಳೆ. ನಾಗರಾಜಪ್ಪ ಹತ್ಯೆಗೈದ ಆರೋಪಿ.
ಘಟನೆಯ ಹಿನ್ನಲೆ: ಆರೋಪಿ ನಾಗರಾಜಪ್ಪ ಪ್ರತಿ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ತನ್ನ ಪತ್ನಿ ಸುಲೋಚನಾ ಜೊತೆ ಜಗಳವಾಡುತ್ತಿದ್ದನು. ಕಳೆದ ಶುಕ್ರವಾರವೂ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸುಲೋಚನಾಗೆ ಮನಬಂದಂತೆ ಥಳಿಸಿದ್ದು, ಸುಲೋಚನಾ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಬಳಿಕ ದಿಕ್ಕು ತೋಚದೆ ಸಂತೇಬೆನ್ನೂರು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪತ್ನಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಸಂತೇಬೆನ್ನೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಸುಲೋಚನಾಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ನಿಯನ್ನು ಹತ್ಯೆಗೈದು ಠಾಣೆಗೆ ಶರಣಾಗಿದ್ದ ಪತಿ:ಇತ್ತೀಚೆಗೆ ಪತಿಯೋರ್ವ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದು ಬೆಂಗಳೂರು ನಗರದ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ಶರಣಾಗಿದ್ದ ಘಟನೆ ನಡೆದಿತ್ತು. ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿ ಘಟನೆ ನಡೆದಿತ್ತು. ಸರಿತಾ(35) ಮೃತ ದುರ್ದೈವಿ. ತಾರಾನಾಥ್ ಕೊಲೆಗೈದ ಆರೋಪಿ. ಪತ್ನಿ ಸರಿತಾಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಪತಿ ಹತ್ಯೆಗೈದಿದ್ದ.